ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 14 ರ ಇಂದು ಅಬುಧಾಬಿಯಲ್ಲಿ ಯುಎಇಯ ಐತಿಹಾಸಿಕ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಮಾರ್ಚ್ 1ರಿಂದ ಸಾರ್ವಜನಿಕರಿಗೆ ಪ್ರವೇಶಾವಕಾಶ ಆರಂಭವಾಗಲಿದೆ.
ಯುಎಇಯ ಬಿಎಪಿಎಸ್ ಸ್ವಾಮಿ ನಾರಾಯಣ ಸಂಸ್ಥೆ ಅಬುಧಾಬಿಯಲ್ಲಿ 27 ಎಕರೆ ಪ್ರದೇಶದಲ್ಲಿ ಬೃಹತ್ ಹಿಂದೂ ದೇವಸ್ಥಾನವೊಂದನ್ನು ನಿರ್ಮಿಸಿದೆ. ಇಲ್ಲಿ ಕೃಷ್ಣ-ರಾಧೆ, ಶಿವ- ಪಾರ್ವತಿ ಮತ್ತು ರಾಮ-ಸೀತೆ, ಲಕ್ಷ್ಮಣ ಹಾಗೂ ಹನುಮಂತ ಸೇರಿ ಬಹುತೇಕ ಎಲ್ಲ ಹಿಂದೂ ದೇವರರನ್ನ ಪೂಜಿಸಲಾಗುತ್ತದೆ. ಮಂದಿರವು 108 ಅಡಿ ಎತ್ತರ, 262 ಅಡಿ ಉದ್ದ, 180 ಅಡಿ ಅಗಲವಿದೆ.
ಏಳು ಗೋಪುರಗಳಿಂದ ಅಲಂಕರಿಸಲ್ಪಟ್ಟ ಈ ಮಂದಿರವು ಏಳು ಎಮಿರೇಟ್ಗಳ ಏಕತೆಗೆ ಕೃತಜ್ಞತೆಯನ್ನು ಸಂಕೇತಿಸುತ್ತದೆ, ಇದು ಭಾರತ ಮತ್ತು ಯುಎಇ ನಡುವಿನ ಸಾಮರಸ್ಯದ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಏಳು ಗೋಪುರಗಳು ಏಳು ಪ್ರಮುಖ ದೇವತೆಗಳಿಗೆ ಗೌರವ ಸಲ್ಲಿಸುತ್ತವೆ, ಇದು ಸಂಸ್ಕೃತಿಗಳು ಮತ್ತು ಧರ್ಮಗಳ ಪರಸ್ಪರ ಸಂಬಂಧವನ್ನು ಒತ್ತಿಹೇಳುತ್ತದೆ.