ಮಂಗಳೂರು : ಶಿಕ್ಷಕನೋರ್ವ ಮಾನಹಾನಿ ಸಂದೇಶ ಕಳುಹಿಸಿದ ಹಿನ್ನೆಲೆ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಬಳಿ ನಡೆದಿದೆ.
ಶಿಕ್ಷಕ ರೂಪೇಶ್ ಪೂಜಾರಿ ಎಂಬಾತ ಮೃತ ವಿದ್ಯಾರ್ಥಿನಿಯ ಬಗ್ಗೆ ಇನ್ನೊಂದು ವಿದ್ಯಾರ್ಥಿನಿಯ ಮೊಬೈಲ್ಗೆ ಮಾನಹಾನಿ ಸಂದೇಶ ಕಳುಹಿಸಿದ್ದನು ಎನ್ನಲಾಗಿದೆ. ಆದ್ದರಿಂದ ಪೋಷಕರು ವಿದ್ಯಾರ್ಥಿನಿ ಜೊತೆ ಶಾಲೆಗೆ ಹೋಗಿ ವಿಚಾರಿಸಿದ್ದರು. ಧರ್ಮಸ್ಥಳದ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕ ಈ ಕೃತ್ಯ ಎಸಗಿದ್ದಾನೆ.
ಘಟನೆಯಿಂದ ಮನನೊಂದ ವಿದ್ಯಾರ್ಥಿನಿ ಫೆ.7 ರಂದು ಇಲಿ ಪಾಷಾಣ ಸೇವಿಸಿದ್ದಳು. ನಂತರ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಆಕೆ ಮೃತಪಟ್ಟಿದ್ದಾಳೆ. ಶಿಕ್ಷಕನ ವಿರುದ್ಧ ಪೊಲೀಸರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.