ಹೊಸದುರ್ಗ : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಾಮಾನ್ಯರ, ಶೋಷಿತರ ಆರ್ಥಿಕ ಚೇತರಿಕೆಗೆ ಜನಪರವಾದ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಇದು ಚುನಾವಣೆ ಗಿಮಿಕ್ ಇದನ್ನು ಜಾರಿಗೆ ತರುವುದಿಲ್ಲ ಎಂದರು. ಗೆದ್ದ ನಂತರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಈಗ ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ನಿಲ್ಲಲಿವೆ ಎಂಬ ಅಪಪ್ರಚಾರ ಶುರುವಾಗಿದೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಈಶ್ವರಪ್ಪನವರಿಗೆ ಕಡಿ, ಬಡಿ, ಕೊಲ್ಲು ಇದು ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. ಮಾತೆತ್ತಿದರೆ ನನಗೆ ಆರ್.ಎಸ್.ಎಸ್ ನಲ್ಲಿ ತರಬೇತಿಯಾಗಿದೆ, ತಾನೊಬ್ಬ ಶಿಸ್ತಿನ ಸಿಪಾಯಿ ಎನ್ನುತ್ತಾರೆ. ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಡಿ.ಕೆ.ಸುರೇಶ್ ಅವರನ್ನು ಗುಂಡಿಟ್ಟು ಕೊಲ್ಲಿ ಎಂದು ಹೇಳುವುದು ಒಂದು ರಾಜಕೀಯ ಪಕ್ಷದ ಮುಖಂಡರಾಗಿ ಹೇಳುವ ಮಾತೇ? ಇವರನ್ನು ರಾಜಕೀಯ ಧುರೀಣರು ಎಂದು ಕರೆಯಬೇಕೇ? ಎಂದು ಪ್ರಶ್ನಿಸಿದ್ದಾರೆ.