![](https://kannadadunia.com/wp-content/uploads/2024/02/WhatsApp-Image-2024-02-07-at-5.07.27-AM.jpeg)
ಬೆಂಗಳೂರು : ತೆರಿಗೆ ಹಂಚಿಕೆ, ಅನುದಾನ, ಬರಪರಿಹಾರ ನೀಡುವುದರಲ್ಲಿ ತೋರುತ್ತಿರುವ ಮಲತಾಯಿ ಧೋರಣೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ದೆಹಲಿಯಲ್ಲಿ ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ.
ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುವ ಈ ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಸಂಸದರು, ಶಾಸಕರು ಹಾಗೂ ಕೆಲ ಸಂಘಟನೆಗಳ ಪ್ರಮುಖರು ಭಾಗಿಯಾಗಲಿದ್ದಾರೆ.
ರಾಜ್ಯದಿಂದ ಪ್ರತಿ ವರ್ಷ ಕೇಂದ್ರಕ್ಕೆ 4, 30,000 ಕೋಟಿ ತೆರಿಗೆ ವಸೂಲಿ ಆಗಿ ಹೋಗುತ್ತಿದೆ. ತೆರಿಗೆ ಸಂಗ್ರಹಣೆಯಲ್ಲಿ ಮಹಾರಾಷ್ಟ್ರಬಿಟ್ಟರೆ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ನಮಗೆ ಈ ವರ್ಷ ತೆರಿಗೆ ಪಾಲಿನಲ್ಲಿ ರೂ.37,252 ಕೋಟಿ ಬರುವುದು. ಕೇಂದ್ರ ಪುರಸ್ಕೃತ ಯೋಜನೆಯಲ್ಲಿ 13,005 ಕೋಟಿ ರೂಪಾಯಿ, ಎರಡೂ ಸೇರಿ ಕೇವಲ 50,257 ಕೋಟಿ ರೂಪಾಯಿ ರಾಜ್ಯಕ್ಕೆ ಬಂದಿದೆ. ರಾಜ್ಯಕ್ಕೆ ಇದು ಭೀಕರ ಅನ್ಯಾಯ ಅಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಒಟ್ಟು ಲೆಕ್ಕದಲ್ಲಿ ರಾಜ್ಯದಿಂದ 100 ರೂ. ಕೇಂದ್ರಕ್ಕೆ ಹೋದರೆ ಅದರಲ್ಲಿ ನಮಗೆ 12- 13 ರೂ.ಗಳು ಮಾತ್ರ ವಾಪಾಸ್ ಬರುತ್ತಿದೆ. ಉಳಿದದ್ದು ಕೇಂದ್ರ ಸರ್ಕಾರ ಇಟ್ಟುಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರವೇ ಅಂಕಿ ಅಂಶಗಳನ್ನು ನೀಡಿದೆ ಎಂದು ತಿಳಿಸಿದ್ದಾರೆ.
GST ಜಾರಿಗೆ ಬಂದಾಗ ಇದು ಅವೈಜ್ಞಾನಿಕ ಎಂದು ನಾವು ಸಾರಿ ಸಾರಿ ಹೇಳಿದೆವು. ಆಗ ರಾಜ್ಯದ ತೆರಿಗೆ ಬೆಳವಣಿಗೆ ದರ 15% ಇತ್ತು. ಇದರಿಂದ ತೆರಿಗೆ, ಕೇಂದ್ರದ ಅನುದಾನವೂ ಹೆಚ್ಚಾಗತ್ತೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಅದನ್ನೂ ಪರಿಹಾರ ರೂಪದಲ್ಲಿ ರಾಜ್ಯಕ್ಕೆ ತುಂಬಿ ಕೊಡುವುದಾಗಿ ಕೇಂದ್ರ ಹೇಳಿತ್ತು. ಈ ಪರಿಹಾರ ಜೂನ್ 2022 ಕ್ಕೆ ನಿಲ್ಲಿಸಿದ್ದಾರೆ. ಈಗ ಪರಿಹಾರ ಕೊಡುತ್ತಿಲ್ಲ. 5 ವರ್ಷಗಳ ಕಾಲ ಮಾತ್ರ ಪರಿಹಾರ ಕೊಟ್ಟರು. ಇದರಿಂದಾಗಿ ಈಗ ನಮ್ಮತೆರಿಗೆ ಬೆಳವಣಿಗೆ 15% ಗೆ ಮತ್ತೆ ತಲುಪಲು ಆಗಲೇ ಇಲ್ಲ. ಹೀಗಾಗಿ ಪರಿಹಾರ ಮುಂದುವರೆಸಿ ಎಂದು ಕೇಳಿದೆವು. ಇವತ್ತಿನವರೆಗೂ ಮುಂದುವರೆಸುವ ಬಗ್ಗೆ ತೀರ್ಮಾನವನ್ನೇ ಮಾಡಿಲ್ಲ. ಈಗಲೂ ನಮಗೆ, ನಮ್ಮ ರಾಜ್ಯಕ್ಕೆ GST ನಲ್ಲಿ ಅನ್ಯಾಯ ಆಗುತ್ತಲೇ ಇದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
![](https://kannadadunia.com/wp-content/uploads/2024/02/chalo-delhi.jpg)