ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಕೆಲವರಿಗೆ ಹಣ ಬಂದಿಲ್ಲಇದುವರೆಗೂ ದುಡ್ಡು ಬಾರದೇ ಇದ್ದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಂತ ಹಂತವಾಗಿ ಹಣ ಹಾಕುವ ಪ್ರಕ್ರಿಯೆ ನಡೆಯುತ್ತಿದೆ.
ಹಲವು ಯಜಮಾನಿಯರ ಖಾತೆಗೆ ಇನ್ನೂ ಕೂಡ ಗೃಹಲಕ್ಷ್ಮಿ ಹಣ ಬಂದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ (ಇಡಿಸಿಎಸ್) ನಿರ್ದೇಶನಾಲಯದೊಂದಿಗೆ ಸಭೆ ನಡೆಸಿ ಮಹತ್ವದ ನಿರ್ಧಾರ ಕೈಗೊಂಡಿದೆ.
ಗೃಹಲಕ್ಷ್ಮಿಯರಿಗೆ ಐಟಿ/ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ದೃಢೀಕರಣ ಪತ್ರ ನೀಡಲು ಸರ್ಕಾರ ನಿರ್ಧರಿಸಿದೆ.
ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯಾಗಿದ್ದು, ವಾಸ್ತವವಾಗಿ ತೆರಿಗೆ ಪಾವತಿಸದಿದ್ದರೂ ಐಟಿ (ಆದಾಯ ತೆರಿಗೆ) ಅಥವಾ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ತೆರಿಗೆದಾರರರೆಂದು ಪೋರ್ಟಲ್ನಲ್ಲಿ ತೋರಿಸುತ್ತಿತ್ತು. ಇದರಿಂದಾಗಿ ಯೋಜನೆಗೆ ಫಲಾನುಭವಿಗಳಾಗಲು ನೋಂದಣಿ ಮಾಡಿಸಿ ಆರು ತಿಂಗಳಾಗಿದ್ದರೂ ಬಹಳಷ್ಟು ಮಹಿಳೆಯರು ಸರ್ಕಾರದಿಂದ ಹಣ ಪಡೆಯಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಇಲಾಖೆ ಯಜಮಾನಿಯರಿಗೆ ಐಟಿ/ಜಿಎಸ್ಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ದೃಢೀಕರಣ ಪತ್ರ ನೀಡಲು ಸರ್ಕಾರ ನಿರ್ಧರಿಸಿದೆ.
ಅರ್ಹರು ಸಂಬಂಧಪಟ್ಟ ಐಟಿ/ಜಿಎಸ್ಟಿ ಪ್ರಾಧಿಕಾರಗಳಿಂದ ತಾವು ತೆರಿಗೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ದೃಢೀಕರಣ ಪತ್ರ ಪಡೆದು ಆಯಾ ತಾಲೂಕು ತಿಶು ಅಭಿವೃದ್ಧಿ ಯೋಜನಾ ಕಚೇರಿ(ಸಿಡಿಪಿಒ)ಗೆ ಸಲ್ಲಿಸಬೇಕು. ಈ ಕಚೇರಿಯವರು ತಮ್ಮ ತಾಲೂಕಿಗೆ ಸಂಬಂಧಪಟ್ಟ ಅರ್ಹರ ದಾಖಲೆಗಳನ್ನು ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ತಲುಪಿಸಬೇಕಿದೆ.ನಂತರ ಜಿಲ್ಲಾ ಉಪ ನಿರ್ದೇಶಕರು ತಮ್ಮ ಜಿಲ್ಲೆ ವ್ಯಾಪ್ತಿಯ ಪ್ರಕರಣಗಳ ಮಾಹಿತಿಯನ್ನು ಪ್ರಧಾನ ಕಚೇರಿಗೆ ಸಲ್ಲಿಸಬೇಕು. ಇಲ್ಲಿಂದ ಇ-ಆಡಳಿತ ಇಲಾಖೆಯ ಕುಟುಂಬ ತಂತ್ರಾಂಶದ ವಿಭಾಗಕ್ಕೆ ರವಾನೆಯಾಗಲಿದ್ದು ಅರ್ಜಿಗಳ ಪುನರ್ ಪರಿಶೀಲನೆ ನಡೆಯಲಿದೆ. ನಂತರ ಅರ್ಹರಿಗೆ ಯೋಜನೆಯ ಹಣ ಪಾವತಿಯಾಗಲಿದೆ ಎಂದು ಹೇಳಲಾಗಿದೆ.