![](https://kannadadunia.com/wp-content/uploads/2024/02/WhatsApp-Image-2024-02-03-at-11.07.23-AM.jpeg)
ಬೆಂಗಳೂರು : ರಾಜ್ಯದ ಮುಜರಾಯಿ ದೇವಾಲಯಗಳಿಗೆ ಡಿಜಿಟಲ್ ಸೌಲಭ್ಯದ ಸ್ಪರ್ಶವಾಗಿದೆ. ದೇಗುಲಗಳು ಆಧುನಿಕತೆಯ ಹಾದಿಯಲ್ಲಿ ಸಾಗಿದ್ದು, ಇದೀಗ ಆನ್‌ಲೈನ್ ಮೂಲಕ ಹಾಗೂ ಮೊಬೈಲ್ ಮೂಲಕ ಕಾಯ್ದಿರಿಸಲು ಪೋರ್ಟಲ್, ಮೊಬೈಲ್ ಅಪ್ ಬಿಡುಗಡೆ ಮಾಡಲಾಗಿದೆ.
ಇದರ ಭಾಗವಾಗಿ ಮೊದಲ ಹಂತದಲ್ಲಿ ಬೆಂಗಳೂರು ಬನಶಂಕರಿಯಲ್ಲಿರುವ ಶ್ರೀ ಬನಶಂಕರಿ ಅಮ್ಮನವರ ದೇವಾಲಯದಲ್ಲಿ ಪೋರ್ಟಲ್ ಹಾಗೂ ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಇದಕ್ಕೆ ಶುಕ್ರವಾರ (02-02-2024) ಚಾಲನೆ ನೀಡಲಾಯಿತು.
ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಭಕ್ತಾಧಿಗಳ ಅನುಕೂಲಕ್ಕಾಗಿ ದೇವಾಲಯಗಳಲ್ಲಿ ಏರ್ಪಾಡಾಗುವ ಸೇವೆಗಳನ್ನು ಆನ್‌ಲೈನ್ ಮೂಲಕ ಹಾಗೂ ಮೊಬೈಲ್ ಮೂಲಕ ಕಾಯ್ದಿರಿಸಲು ಪೋರ್ಟಲ್ ಹಾಗೂ ಮೊಬೈಲ್ ಅಪ್ ಅನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿರುತ್ತದೆ.
ಇದೇ ವೇಳೆ, ರಾಜ್ಯದಲ್ಲಿರುವ ಸುಮಾರು 34,563 ಅಧಿಸೂಚಿತ ‘ಸಿ’ ವರ್ಗದ ದೇವಾಲಯಗಳ ಅರ್ಚಕರಿಗೆ ಪಾವತಿಸಲಾಗುವ ತಸ್ತೀಕ್ ಹಾಗೂ ವರ್ಷಾಸನವನ್ನು ಮತ್ತು ಅರ್ಚಕರಿಗೆ ನೀಡಲಾಗುವ ಮರಣ ಪರಿಹಾರ ಹಾಗೂ ಅರ್ಚಕರ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ಪ್ರೋತ್ಸಾಹ ಧನ ವನ್ನು ನೇರವಾಗಿ ಅರ್ಚಕರ ಖಾತೆಗೆ ಪಾವತಿಸಲು ಅನುವು ಆಗುವಂತೆ ಅಭಿವೃದ್ಧಿ ಪಡಿಸಲಾಗಿರುವ ಪೋರ್ಟಲ್ ಹಾಗೂ ಮೊಬೈಲ್ ಆಪ್’ನ್ನೂ ಸೇವೆಗೆ ಸಮರ್ಪಿಸಲಾಯಿತು.