![](https://kannadadunia.com/wp-content/uploads/2024/02/TeleICU-Hub.jpg)
ಬಳ್ಳಾರಿ : ಸಾರ್ವಜನಿಕ ಆಸ್ಪತ್ರೆಗಳ ಐಸಿಯುಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಜಿಲ್ಲಾ ಆಸ್ಪತ್ರೆ, ವಿಮ್ಸ್ ಹಾಗೂ ಮೇಲ್ಮಟ್ಟದ ಆಸ್ಪತ್ರೆಗಳಿಂದ ರೋಗದ ಅನುಸಾರ ತಜ್ಞವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡುವ ಮಹತ್ವಪೂರ್ಣ ಕಾರ್ಯವಿಧಾನವಾದ ಕಲ್ಯಾಣ ಕರ್ನಾಟಕದಲ್ಲಿ ಮೊದಲ ಟೆಲಿಐಸಿಯು ಹಬ್ ಬಳ್ಳಾರಿಯ ಜಿಲ್ಲಾ ಅಸ್ಪತ್ರೆಯಲ್ಲಿ ಶುಕ್ರವಾರ ಚಾಲನೆಗೊಂಡಿತು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ವರ್ಚುವಲ್ ಮೂಲಕ ಉದ್ಘಾಟನೆ ನೆರವೇರಿಸಿದರು.
ಕರ್ನಾಟಕ ರಾಜ್ಯ ಸರಕಾರವು ಕಡುಬಡವರಿಗೆ ಗುಣ ಮಟ್ಟದ ಆರೋಗ್ಯ ಸೇವೆಗಳನ್ನು ಸ್ಥಳೀಯವಾಗಿ ದೊರಕಿಸಿ ಹೆಚ್ಚಿನ ಚಿಕಿತ್ಸೆಗೆ ದೂರದೂರಿಗೆ ರೋಗಿಗಳನ್ನು ಕಳುಹಿಸುವುದನ್ನು ತಪ್ಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ವಿನೋದ್ ಖೋಸ್ಲಾ ಫ್ಯಾಮಿಲಿ ಫೌಂಡೇಶನ್ ಸಹಕಾರದೊಂದಿಗೆ ಟೆಲಿಐಸಿಯು ಮೂಲಕ ಚಿಕಿತ್ಸೆ ನೀಡಲು ಮಹತ್ವಾಕಾಂಕ್ಷಿ ಕಾರ್ಯ ಯೋಜನೆ ಹಾಕಿಕೊಂಡಿದ್ದು, ಬಳ್ಳಾರಿಯಲ್ಲಿ ಟೆಲಿ ಹಬ್ ಸ್ಥಾಪಿಸುವ ಮೂಲಕ ಕಲ್ಯಾಣ ಕರ್ನಾಟಕದಲ್ಲಿಯೂ ಸಹ ತುರ್ತು ಸಂದರ್ಭಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಹೆಜ್ಜೆ ಇಟ್ಟಿದೆ.
ಟೆಲಿ ಐಸಿಯು ಹಬ್ ಆಸ್ಪತ್ರೆಯು ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಟೆಲಿಐಸಿಯು ಸ್ಪೋಕ್ ಆಸ್ಪತ್ರೆಯು ಸಂಡೂರು ಮತ್ತು ಸಿರಗುಪ್ಪ ತಾಲೂಕು ಸಾರ್ವಜನಿಕ ಆಸ್ಪತ್ರೆ, ಬಸವಕಲ್ಯಾಣ, ಅಳಂದ, ಶಹಾಪೂರ, ಜೇವರ್ಗಿ, ಲಿಂಗಸೂಗುರು, ಸಿಂಧನೂರು, ಯಲಬುರ್ಗಾ, ಹೊಸಪೇಟೆ ಹಾಗೂ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿದೆ.
ಈ ಸಂದರ್ಭದಲ್ಲಿ ಯುವಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಮಾತನಾಡಿ, ಅತೀ ತುರ್ತು ಸಂದರ್ಭಗಳಾದ ಹೃದಯಾಘಾತ ಮತ್ತು ಪಾಶ್ರ್ವವಾಯು ಘಟಿಸಿದ ಸಂದರ್ಭಗಳಲ್ಲಿ ಇವರುಗಳಿಗೆ ತಕ್ಷಣ 2-3 ಗಂಟೆಯೊಳಗಡೆ ಚಿಕಿತ್ಸೆ ನೀಡಲು ಸಹಕರಿಯಾಗುವ ಜೊತೆಗೆ ಗ್ರಾಮೀಣ ಭಾಗದಲ್ಲಿ ಇವುಗಳಿಂದ ಉಂಟಾಗುವ ಸಾವು ನೋವುಗಳನ್ನು ತಪ್ಪಿಸಲು ಹಾಗೂ ಅಂಗವಿಕಲತೆಯನ್ನು ತಡೆಗಟ್ಟಲು ಅತ್ಯಂತ ಮಹತ್ವಪೂರ್ಣವಾಗಿದ್ದು, ಜೊತೆಗೆ ರೋಗಿಗಳು ತಮ್ಮ ಸ್ವಸ್ಥಾನದಲ್ಲಿಯೇ (ಗ್ರಾಮೀಣ ಭಾಗದಲ್ಲಿ ) ಚಿಕಿತ್ಸೆ ಪಡೆಯಲು ಅನುಕೂಲವಾಗಿದೆ ಎಂದು ಹೇಳಿದರು.
ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಸಂಡೂರು ಮತ್ತು ಸಿರುಗುಪ್ಪ ತಾಲೂಕು ಮಟ್ಟದ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ (ಸ್ಪೋಕ್ ಆಸ್ಪತ್ರೆ ) ದಾಖಲಾಗುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡಲು ತಜ್ಞ ವೈದ್ಯರು ಸದಾ ಸಿದ್ದರಿರುತ್ತಾರೆ ಎಂದರು.
ಕಾರ್ಯವಿಧಾನ:
ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಚಿಕಿತ್ಸಾ ವಿಧಾನ ಮತ್ತು ಔಷಧೋಪಚಾರದಲ್ಲಿ ಮೇಲ್ಮಟ್ಟದ ಆಸ್ಪತ್ರೆಯ ತಜ್ಞರ ಸಹಾಯ, ಸಲಹೆ ಬೇಕಾಗುವ ಸನ್ನಿವೇಶ ಬಂದಾಗ ಅಲ್ಲಿ ಅಳವಡಿಸಿರುವ ಟೆಲಿಐಸಿಯು (ಟೆಲಿ ಕ್ಯಾಮರಾ) ವೆಬ್ ಕ್ಯಾಮರಾ ಮೂಲಕ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಥಾಪಿಸಲ್ಪಟ್ಟ ಟೆಲಿಐಸಿಯು ಹಬ್ ಗೆ ಸಂಪರ್ಕಿಸಿ ಸಮಾಲೋಚನೆ ಕೈಗೊಳ್ಳುತ್ತಾರೆ. ನಂತರ ಹಬ್ನಲ್ಲಿಯ ತಜ್ಞ ವೈದ್ಯರು ವೆಬ್ ಕ್ಯಾಮರಾ ಮೂಲಕ ರೋಗಿಯ ಆರೋಗ್ಯ ಸ್ಥಿತಿಯನ್ನು ವಿಕ್ಷಿಸಿ ಈಗಾಗಲೆ ನೀಡಿರುವ ಚಿಕಿತ್ಸೆಯನ್ನು ಪರಿಶೀಲಿಸಿ ಚಿಕಿತ್ಸಾ ವಿಧಾನಗಳನ್ನು ಅಂತಿಮಗೊಳಿಸುವರು. ಹಬ್ ಮೂಲಕ ತಜ್ಞವೈದರು ನೀಡಿದ ಸಲಹೆಯಂತೆ ತಾಲೂಕು ಮಟ್ಟದಲ್ಲಿ ತಜ್ಞರು ಚಿಕಿತ್ಸೆಯನ್ನು ಮುಂದುವರೆಸುವರು. ಅಗತ್ಯವೇನಿಸಿದಾಗ ಪುನಃ ಸಂಪರ್ಕಿಸಿ ರೋಗಿಯು ಗುಣಮುಖರಾಗಲು ಸಹಕರಿಸುವರು. ಇನ್ನೂ ಹೆಚ್ಚಿನ ತಜ್ಞತೆಯ ಅವಶ್ಯಕತೆಯು ಕಂಡು ಬಂದಾಗ ಬೆಂಗಳೂರು ಮಟ್ಟದಲ್ಲಿ ತಜ್ಞರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ನೀಡುವರು.
ಟೆಲಿ ಐಸಿಯು ಹಬ್ ಮೂಲಕ ದೊರಕುವ ತಜ್ಞತೆಯ ತುರ್ತು ವೈದ್ಯಕೀಯ ಸೇವೆಗಳು:
ಸರ್ಜರಿ, ಮೆಡಿಸಿನ್, ಎಲುಬು-ಕೀಲು, ಕಿವಿ-ಮೂಗು-ಗಂಟಲು, ಪ್ರಸೂತಿ, ಅರವಳಿಕೆ.
ಉಪಯೋಗಗಳು:
ರೋಗಿಯು ಶೀಘ್ರ ಗುಣಮುಖರಾಗಲು ವ್ಯವಸ್ಥೆ ಹಾಗೂ ಚಿಕಿತ್ಸೆ ಪಡೆಯುವ ರೋಗಿಯನ್ನು ಪದೇ ಪದೇ ರೇಫರ್ ಮಾಡುವ ವಿಧಾನ ತಪ್ಪುವುದು. ರೋಗಿಯ ಆರೈಕೆದಾರರಿಗೆ ಸಮಯ ಮತ್ತು ಹಣ ಉಳಿತಾಯವಾಗುವುದು. ತಜ್ಞ ವೈದ್ಯರಿಗೆ ಆತ್ಮಸ್ಥೈರ್ಯ ಹೆಚ್ಚುವುದು. ಆಧುನಿಕ ತಂತ್ರಜ್ಞಾನವು ತಾಲೂಕು ಮಟ್ಟದ ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ದೊರಕಲು ಸಹಾಯಕ. ದಿನದ 24 ಗಂಟೆ ಸೌಲಭ್ಯವಿರುವುದರಿಂದ ರೋಗಿಯ ಆರೈಕೆಗೆ ಸಹಾಯಕ ಹಾಗೂ ಪಾಲಕರಿಗೂ ನೆಮ್ಮದಿ ದೊರಕುವುದು.
ರಾಜ್ಯ ಮಟ್ಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ ಗುಂಡೂರಾವ್, ವಿಧಾನಪರಿಷತ್ ಸದಸ್ಯ ಹೆಚ್.ಎಂ.ರೇವಣ್ಣ, ಐಸಿಯು ಹಬ್ ಮುಖ್ಯಸ್ಥ ಶ್ರೀಕಾಂತ್ ನಾದಮುನಿ, ವಿನೋದ್ ಖೊಸ್ಲಾ ಪ್ಯಾಮಿಲಿ ಪೌಂಡೆಷನ್ ಸೇರಿದಂತೆ ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು, ಅಭಿಯಾನ ನಿರ್ದೇಶಕರು, ನಿರ್ದೇಶಕರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ಶಾಸಕರಾದ ಬಿ.ಎಮ್.ನಾಗರಾಜ್, ನಾರಾ ಭರತ್ ರೆಡ್ಡಿ, ಮಹಾನಗರ ಪಾಲಿಕೆಯ ಮೇಯರ್ ಬಿ.ಶ್ವೇತಾ, ಉಪಮೇಯರ್ ಬಿ.ಜಾನಕಿ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಹಾಗೂ ತಜ್ಞ ವೈದ್ಯರು ಮತ್ತು ವಿವಿಧ ಜಿಲ್ಲೆಗಳ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಇದ್ದರು.