ಮಂಡ್ಯ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ ಸರ್ಕಾರದ ಕ್ರಮ ಖಂಡಿಸಿ ಬಜರಂಗದಳ ರಾಜ್ಯಾದ್ಯಂತ ಹನುಮ ಧ್ವಜ ಅಭಿಯಾನಕ್ಕೆ ಕರೆ ಕೊಟ್ಟಿದೆ.
ಇಂದಿನಿಂದ ಫೆಬ್ರವರಿ 9ರವರೆಗೆ ಬಜರಂಗದಳ ವತಿಯಿಂದ ರಾಜ್ಯಾದ್ಯಂತ ಹನುಮ ಧ್ವಜ ಅಭಿಯಾನ ನಡೆಸಲಾಗುತ್ತಿದೆ. ಫೆ.9ರಂದು ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಎದುರು ಹನುಮಾನ್ ಚಾಲೀಸಾ ಪಠಣ ಮಾಡಲು ಕರೆ ನೀಡಲಾಗಿದೆ.
ಮಂಡ್ಯ ಘಟನೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವಾಗಿದೆ. ಸಮಾಜಕ್ಕೆ ವಿಶ್ವಾಸ ತುಂಬಲು ಧಾರ್ಮಿಕ ಕೇಂದ್ರಗಳಲ್ಲಿ ಹನುಮ ಧ್ವಜ ಅಭಿಯಾನ ನಡೆಯಲಿದೆ. ರಾಜ್ಯದ ಮನೆ ಮನೆಗಳಲ್ಲಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಹನುಮ ಧ್ವಜ ಹಾಕುವಂತೆ ಮನವಿ ಮಾಡುತ್ತೇವೆ. ಇಂದಿನಿಂದ ಫೆಬ್ರವರಿ 9ರವರೆಗೆ ಅಭಿಯಾನ ನಡೆಸಲಾಗುವುದು ಎಂದು ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್.ತಿಳಿಸಿದ್ದಾರೆ.
ಕೆರಗೋಡು ಗ್ರಾಮದಲ್ಲಿ ಅದೇ ಜಾಗದಲ್ಲಿ ಮತ್ತೆ ಹನುಮ ಧ್ವಜ ಹಾರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹನುಮಾನ್ ಚಾಲೀಸಾ ಪಠಣ, ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದ್ದಾರೆ.