ಶಿವಮೊಗ್ಗ : ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತೆ ಪ್ರತಿದಿನ ಸಂಜೆ ಅಥವಾ ರಜಾ ಅವಧಿಯಲ್ಲಿ ವಿಶೇಷ ತರಗತಿಗಳನ್ನು ನಡೆಸುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ನಗರದ ಹೊರವಲಯದಲ್ಲಿರುವ ತುಂಗಾನಗರದ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಿಕ್ಷಣದ ಮಹತ್ವವನ್ನು ಅರಿತ ಮುಸ್ಲಿಂ ಸಮುದಾಯದವರು ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚುಹೆಚ್ಚು ಸಂಖ್ಯೆಯಲ್ಲಿ ತೊಡಗಿಸುತ್ತಿದ್ದಾರೆ. ಮಕ್ಕಳೂ ಕೂಡ ಓದಿನಲ್ಲಿ ಅಸಾಧಾರಣ ಪ್ರತಿಭಾ ಸಂಪನ್ನರಾಗಿರುವುದು ವಿಶೇಷವಾಗಿದೆ ಎಂದರು.
ಇಂದು ದೇಶದಲ್ಲಿ ಜಾತಿ-ಧರ್ಮ ಭಾಷೆ, ಬಣ್ಣ ಮೀರಿ ಬೆಳೆಯಲು ಶಿಕ್ಷಣ ಅಗತ್ಯವಾಗಿದೆ ಎಂದ ಅವರು ಉಚಿತ ಮತ್ತು ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರು ಅತ್ಯಂತ ಕ್ರಿಯಾಶೀಲರು ಹಾಗೂ ಪ್ರತಿಭಾವಂತರಿದ್ದಾರೆ ಎಂದ ಅವರು ನಾಡಿನ ಸಮಸ್ತ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಸರ್ಕಾರಿ ಶಾಲೆಗಳಲ್ಲಿ ನಡೆಸಲು ಮುಂದಾಗುವಂತಹ ರೀತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಪಠ್ಯ ಮಾತ್ರವಲ್ಲದೇ ಪಠ್ಯೇತರ ಚಟುವಟಿಗಳಲ್ಲಿಯೂ ಸರ್ಕಾರಿ ಶಾಲಾ ಮಕ್ಕಳ ಸಾಧನೆ ಅದ್ವಿತೀಯವಾಗಿದೆ. ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಸ್ಮಾರ್ಟ್ಕ್ಲಾಸ್ ಜೊತೆಗೆ ಅಗತ್ಯವಾಗಿರುವ ಕಂಪ್ಯೂಟರ್ಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಯತ್ನಿಸಲಾಗುವುದು. ಈಗಾಗಲೇ ಸರ್ಕಾರಿ ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ಒದಗಿಸಲು ಸರ್ಕಾರದ ಆದೇಶ ಹೊರಡಿಸಲಾಗಿದೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಉರ್ದು ಭಾಷಿಕ ಮಕ್ಕಳು ಓದಿನತ್ತ ಒಲವು ತೋರಿಸುತ್ತಿದ್ದಾರೆ. ಶೈಕ್ಷಣಿಕವಾಗಿ ವಿಶೇಷ ಸಾಧನೆ ತೋರುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕು. ಯಾವುದೇ ವಿದ್ಯಾರ್ಥಿಗಳು ಓದಿನಿಂದ ಹೊರಗುಳಿಯದಂತೆ ಗಮನಹರಿಸಬೇಕು. ಎಲ್ಲಾ ಮಕ್ಕಳನ್ನು ನಿರಂತರವಾಗಿ ಶಾಲೆಗೆ ಆಕರ್ಷಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರದ ಜೊತೆಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ, ಹಾಲು ಒದಗಿಸಲಾಗುತ್ತಿದೆ. ಅಲ್ಲದೇ ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಕಟ್ಟಡ, ಶೌಚಾಲಯ, ಅಡುಗೆಕೋಣೆ ಮುಂತಾದ ಮೂಲ ಭೂತ ಸೌಕರ್ಯಗಳನ್ನು ಒದಗಿಸಲು ವಿಶೇಷ ಗಮನಹರಿಸಲಾಗುವುದು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪದಾಧಿಕಾರಿಗಳು ಶಾಲೆಯ ಸರ್ವಾಂಗೀಣ ವಿಕಾಸಕ್ಕೆ ಗಮನಹರಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್, ಕಲಗೋಡು ರತ್ನಾಕರ್, ಆರ್.ಪ್ರಸನ್ನಕುಮಾರ್, ಮಂಜುನಾಥ್, ಹಬೀಬ್ಖಾನ್, ಮನ್ಸೂರ್, ಲಿಯಾಖತ್, ಶಿಕ್ಷಕಿ ಶ್ರೀಮತಿ ಸುಮಾ ಮುಂತಾದವರು ಉಪಸ್ಥಿತರಿದ್ದರು.