ಬೆಂಗಳೂರು : ರಾಜ್ಯದ ಜನತೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಿಹಿಸುದ್ದಿ ನೀಡಿದ್ದು, ಒಂದೇ ಸೂರಿನಲ್ಲಿ ಪಹಣಿ ತಿದ್ದುಪಡಿ ಸೇರಿ ಜನಸಾಮಾನ್ಯರ ಸಮಸ್ಯೆ ಬಗೆಹರಿಸಲು ಕಂದಾಯ ಅದಾಲತ್ ಶೀಘ್ರದಲ್ಲೇ ದಿನಾಂಕ ಘೋಷಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಸಚಿವರು, ಜನರ ಸಮಸ್ಯೆಗೆ ಒಂದೇ ಸೂರಿನಡಿ ಪರಿಹಾರ ನೀಡುವ ಕಂದಾಯ ಅದಾಲತ್ ಗೆ ಶೀಘ್ರವೇ ದಿನಾಂಕ ಘೋಷಿಸಲಾಗುವುದು. ಕಾಲಕಾಲಕ್ಕೆ ತಿದ್ದುಪಡಿ ಅಧಿಕಾರವನ್ನು ಸಹಾಯಕ ಆಯುಕ್ತರಿಂದ ತಹಸೀಲ್ದಾರ್ ಪ್ರತ್ಯಾಯೋಜಿಸಿ ಮುಂದುವರೆಸಿಕೊಂಡು ಬರಲಾಗುತ್ತಿದ್ದು, ಈ ಅಧಿಕಾರ ಪ್ರತ್ಯಾಯೋಜನೆಯು ೨೦೨೩ ಡಿಸೆಂಬರ್ ೩೧ ರಂದು ಮುಕ್ತಾಯಗೊಂಡಿದೆ ಎಂದರು.
ಕೇಂದ್ರ ಸರ್ಕಾರವು ಆರ್.ಟಿ.ಸಿ.ಗೆ ಆಧಾರ್ ಲಿಂಕ್ ಮಾಡಲು ನಿರ್ದೇಶನ ನೀಡಿದ್ದು, ಮುಂದಿನ ದಿನದಲ್ಲಿ ಇದರ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಜೊತೆಗೆ ಕಂದಾಯ, ಸರ್ವೆ, ಸಬ್ ರಿಜಿಸ್ಟಾರ್ ಕಚೇರಿಯ ಎಲ್ಲಾ ದಾಖಲೆಗಳು ಫೆಬ್ರವರಿ 1 ರಿಂದ ಮುಂದಿನ ಒಂದೂವರೆ ವರ್ಷದಲ್ಲಿ ದಾಖಲೀಕರಣ ಮಾಡಲಾಗುತ್ತಿದೆ. ಇದರಿಂದ ವಂಚನೆ ತಡೆಯುವುದಲ್ಲದೆ ದಾಖಲೆ ಹುಡುಕುವ ತಾಪತ್ರಯ ತಪ್ಪಲಿದೆ. ಇದಕ್ಕೆಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದ ಅವರು, ಸರ್ವೇಯರ್ ನೇಮಕಾತಿಗೂ ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.