ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದ ಹನುಮ ಧ್ವಜ ವಿವಾದ ರಾಜಕೀಯ ತಿರುವು ಪಡೆದುಕೊಂಡಿದೆ. ಘಟನೆ ಸಂಬಂಧ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದೆ. ಜೈ ಶ್ರೀ ರಾಮ್ ಎಂದರೆ ಜೈಲಿಗೆ ಹಾಕ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಭಾರತೀಯತೆ ಮತ್ತು ಹಿಂದೂಗಳ ಅಸ್ಮಿತೆಯ ಮೇಲೆ ದಾಳಿ ಮಾಡುವ ವಿದೇಶಿ ಮನಸ್ಥಿತಿಯ ಸರ್ಕಾರವು ರಾಜ್ಯದಲ್ಲಿ ಅನುಷ್ಠಾನಗೊಳಿಸಿ ಪಾಲಿಸುತ್ತಾ ಬಂದಿರುವ ನಿಯಮಗಳು: ಔರಂಗಜೇಬ್ ಫ್ಲೆಕ್ಸ್ ಹಾಕಲು ಕಿಡಿಗೇಡಿಗಳಿಗೆ ಅವಕಾಶವಿದೆ. ಊರವರು ಸೇರಿ ಹನುಮಧ್ವಜ ಹಾರಿಸಲು ಅವಕಾಶವಿಲ್ಲ. ಕೋಲಾರದಲ್ಲಿ ಕತ್ತಿಯ ಕಮಾನು ನಿರ್ಮಿಸಲು ಅನುಮತಿಯಿದೆ. ಜೈ ಶ್ರೀರಾಮ್ ಎಂದರೆ ಜೈಲಿಗೆ. ರಸ್ತೆಗಳಲ್ಲಿ ತಲ್ವಾರ್ ಹಿಡಿದು ಪ್ರದರ್ಶನ ಮಾಡುವವರಿಗೆ ಅನುಮತಿ ಇದೆ. ಹಿಂದೂಗಳು ಭಕ್ತಿಯಿಂದ ಭಜನೆ ಮಾಡಿದರೆ ಸಾರ್ವಜನಿಕ ಶಾಂತಿಗೆ ಭಂಗದ ನೆಪ ಹೇಳಿ ಅನುಮತಿ ನಿರಾಕರಣೆ. ಬೀದಿಗಳಲ್ಲಿ ಇಫ್ತಾರ್ ಕೂಟಕ್ಕೆ ಅನುಮತಿಯಿದೆ. ಗಂಧದಕಡ್ಡಿ ಹಚ್ಚಿದರೆ ಪೊಲೀಸರಿಂದ ತೆರವು. ಸರ್ಕಾರಿ ಮೈದಾನದಲ್ಲಿ ಬಕ್ರೀದ್ಗೆ ಅವಕಾಶವಿದೆ. ಅದೇ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ.
ಪ್ರಭು ಶ್ರೀ ರಾಮನ ಅಸ್ತಿತ್ವ ಪ್ರಶ್ನಿಸಿದಿರಿ, ರಾಮಸೇತು ಎಂಬುದೇ ಇಲ್ಲ ಎಂದಿರಿ, ರಾಮ ಯಾವ ಎಂಜಿನಿಯರಿಂಗ್ ಕಾಲೇಜಿಗೆ ಹೋಗಿದ್ದ ಎಂದು ಕುಹಕವಾಡಿದಿರಿ. ಈಗ ರಾಮಜನ್ಮಭೂಮಿಯಲ್ಲಿ ರಾಷ್ಟ್ರಮಂದಿರ ನಿರ್ಮಾಣ ಸಹಿಸಲಾಗದೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ವಿಘ್ನಸಂತೋಷಿಗಳಂತೆ ವರ್ತನೆ ಮಾಡುತ್ತಿರುವುದು ಕೀಳು ಮನಸ್ಥಿತಿಯ ಹತ್ತು ಮುಖಗಳ ದರ್ಶನ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.