ಬೆಂಗಳೂರು : ಬೆಂಗಳೂರಿನಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ)ಗಳಿಗೆ ಪೊಲೀಸ್ ಇಲಾಖೆಯಿಂದ ಕೆಲವು ಕಠಿಣ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದೆ. ಒಂದು ವೇಳೆ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ ಇದ್ದಲ್ಲಿ ಪಿಜಿ ಲೈಸೆನ್ಸ್ ರದ್ದುಗೊಳಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಲಾಗಿದೆ.
ಏನಿದೆ ಮಾರ್ಗಸೂಚಿಯಲ್ಲಿ..?
(ಕರ್ನಾಟಕ ಪೊಲೀಸ್ ಕಾಯ್ದೆ ಕಲಂ.34(ಡಿ) ಜೊತೆಗೆ ಕಲಂ. 70 ರ ಅನ್ವಯ)
* ಅಗತ್ಯವಿರುವ ಪರವಾನಿಗೆಯನ್ನು ಬಿಬಿಎಂಪಿಯಿಂದ ಕಡ್ಡಾಯವಾಗಿ(ಟ್ರೇಡ್ ಲೈಸನ್ಸ್) ಪಡೆಯುವುದು.
ವಾಸಕ್ಕೆ ಬರುವ ಎಲ್ಲಾ ವ್ಯಕ್ತಿಗಳ ಗುರುತಿನ ಚೀಟಿ ಮತ್ತು ಇತ್ತೀಚಿನ ಭಾವಚಿತ್ರ ಪಡೆದು, ರಕ್ತ ಸಂಬಂಧಿಕರ ವಿವರಗಳನ್ನು ಮೊಬೈಲ್ ಸಂಖ್ಯೆಗಳೊಂದಿಗೆ ತಂತ್ರಜ್ಞಾನದ ಮೂಲಕ (ಗಣಕೀಕರಣ) ದಾಖಲಿಸುವುದು ಹಾಗೂ ಭೇಟಿ ನೀಡಲು ಬರುವವರ (ಸಂಬಂಧಿಕರು/ಸಾರ್ವಜನಿಕರು ಸೇರಿದಂತೆ) ವಿವರಗಳನ್ನು ಪ್ರತ್ಯೇಕವಾಗಿ ನಿರ್ವಹಿಸುವುದು.
*ಕರ್ನಾಟಕ ಸಾರ್ವಜನಿಕರ ಸುರಕ್ಷತೆ ಅಧಿನಿಯಮ-2017 ರ ಅನ್ವಯ ಕಡ್ಡಾಯವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದು ಹಾಗೂ ಅಗ್ನಿ ಅನಾಹುತದ ಕುರಿತಂತೆ ಅಗತ್ಯ ಸುರಕ್ಷತೆ ಕ್ರಮಗಳನ್ನು ಅನುಸರಿಸುವುದು.
*ಮಾದಕ ವಸ್ತುಗಳ ಸೇವನೆ ಮತ್ತು ಸಂಗ್ರಹಣೆಯಿಂದ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡತಕ್ಕದಲ್ಲ.
* ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸ್ಪಂದನೆಯ-112. ವೈದ್ಯಕೀಯ ಸೇವೆಯ-103. ಮತ್ತು ಸೈಬರ್ ಅಪರಾಧಕ್ಕೆ ಸಂಬಂಧಪಟ್ಟ – 1930 ಮುಂತಾದ ಅಗತ್ಯ ಸೇವೆಗಳ ದೂರವಾಣಿ ಸಂಖ್ಯೆಗಳನ್ನು ಎಲ್ಲರಿಗೂ ಗೋಚರವಾಗುವಂತೆ ಪ್ರದರ್ಶಿಸುವುದು ಹಾಗೂ ಪ್ರಥಮ ಚಿಕಿತ್ಸೆ (First-aid Kits) ಸಲಕರಣೆಗಳನ್ನು ಇಟ್ಟುಕೊಳ್ಳುವುದು.
ಕರ್ತವ್ಯಕ್ಕೆ ನೇಮಿಸಿಕೊಳ್ಳುವ ಎಲ್ಲಾ ವ್ಯಕ್ತಿಗಳ (ಅಡುಗೆ ಕೆಲಸ, ಸೆಕ್ಯೂರಿಟಿ ಗಾರ್ಡ್ ಹಾಗೂ ಇನ್ನಿತರೇ ವ್ಯಕ್ತಿಗಳ) ಪೂರ್ವಾಪರಗಳನ್ನು ಪೊಲೀಸ್ ಪರಿಶೀಲನೆಗೆ ಒಳಪಡಿಸಿದ ನಂತರ ಕರ್ತವ್ಯಕ್ಕೆ ನೇಮಿಸಿಕೊಳ್ಳುವುದು ಹ ಹಾಗೂ ಇತರೆ ವಿಳಾಸದ ಧೃಡೀಕರಣ ಸೇರಿದಂತೆ ರಕ್ತ ಸಂಬಂಧಿಕರ ಮಾಹಿತಿಯನ್ನು ಸೂಕ್ತ ದಾಖಲಾತಿಗಳೊಂದಿಗೆ ಪಡೆದು ನಿರ್ವಹಿಸುವುದು.
*ವಿದೇಶಿ ಪ್ರಜೆಗಳು ಪಿ.ಜಿ ಯಲ್ಲಿ ನೆಲಿಸಿದ್ದಲ್ಲಿ, ಮಾಹಿತಿಯನ್ನು The Registration of Foreginers Rules 1939 ಅನ್ವಯ ಫಾರಂ ‘ಸಿ’ ಅನ್ವಯ ಸ್ಥಳೀಯ ಪೊಲೀಸ್ ಠಾಣೆಗೆ ನೇರವಾಗಿ ಅಥವಾ ತಂತ್ರಜ್ಞಾನದ ಮೂಲಕ ನೀಡುವುದು.
*ವಾಸಕ್ಕೆ ಪ್ರವೇಶ ಪಡೆದಿರುವವರನ್ನು ಹೊರತು ಪಡಿಸಿ ಇತರೇ ಯಾರಿಗೂ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡತಕ್ಕದ್ದಲ್ಲ.
*ಸರ್ವೋಚ್ಛ ನ್ಯಾಯಾಲಯದ ಆದೇಶದ ಅನುಸಾರ ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 6-00 ಗಂಟೆಯವರೆಗೆ ಯಾವುದೇ ಧ್ವನಿವರ್ದಕಗಳನ್ನು ಉಪಯೋಗಿಸತಕ್ಕದಲ್ಲ.
*ಒಂದು ವೇಳೆ ಸುರಕ್ಷತಾ ಕ್ರಮ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಯಾವುದಾದರೂ ಅಹಿತಕರ ಘಟನೆ ಸಂಭವಿಸಿದ್ದಲ್ಲಿ ಸಂಬಂಧಪಟ್ಟ ಪಿ.ಜಿ. ಮಾಲೀಕರು ಅಥವಾ ಅದರ ವ್ಯವಸ್ಥಾಪಕರೇ ನೇರ ಹೊಣೆಗಾರರಾಗುತ್ತಾರೆ. ಸಹಾಯಕ್ಕಾಗಿ Helpline Number: 112 ಸಂಪರ್ಕಿಸಬಹುದಾಗಿದೆ.