![](https://kannadadunia.com/wp-content/uploads/2024/01/Hampi-virupaksha-temple.jpg)
ಬೆಂಗಳೂರು : ಮುಜುರಾಯಿ ಇಲಾಖೆಗೆ ಒಳಪಟ್ಟ ಹಂಪಿಯ ವಿರೂಪಾಕ್ಷ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಗೆ ಬಂದಿದೆ. ಬರ್ಮುಡ ಚಡ್ಡಿ, ಜೀನ್ಸ್ ಧರಿಸಿ ಬಂದವರು ಇನ್ನು ಮುಂದೆ ಪಂಚೆ ತೊಡುವುದು ಕಡ್ಡಾಯ. ಮಹಿಳೆಯರು ತುಂಡುಡುಗೆಯಲ್ಲಿ ಬಂದರೆ ಅದರ ಮೇಲೆ ಶಲ್ಯ ತೊಡಬೇಕಾಗಿದೆ.
ಪ್ರವಾಸಕ್ಕೆ ಬರುವವರು ದೇವಸ್ಥಾನಕ್ಕೆ ಭೇಟಿ ನೀಡುವಾಗ ಭಕ್ತಿ ಭಾವನೆ ಉದ್ದೀಪನೆಯ ಉಡುಪು ಧರಿಸಿ ದೇವರ ದರ್ಶನ ಪಡೆಯಬೇಕು. ಈ ಸದುದ್ದೇಶದಿಂದ ಈ ವಿಶೇಷ ಕ್ರಮ ವಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ.ಎಸ್ ದಿವಾಕರ್ ತಿಳಿಸಿದ್ದಾರೆ.
ಹಂಪಿ ವಿರೂಪಾಕ್ಷ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಬರ್ಮುಡ, ಜೀನ್ಸ್, ಚಡ್ಡಿ ಧರಿಸಿ ಬರುವಂತಿಲ್ಲ. ಪಂಚೆ, ದೋತಿ, ಸೀರೆ, ಚೂಡಿದಾರ್ ನಂತಹ ಸಾಂಪ್ರದಾಯಿಕ ಬಟ್ಟೆ ಧರಿಸಿ ಬರಬೇಕು. ದೇವಾಲಯದಲ್ಲಿಯೇ ವಸ್ತ್ರ ನೀಡುವ ವ್ಯವಸ್ಥೆಯನ್ನೂ ಜಾರಿ ಮಾಡಲಾಗಿದೆ. ದೇವಸ್ಥಾನದಲ್ಲಿಯೇ ಸಾಂಪ್ರದಾಯಿಕ ವಸ್ತ್ರ ಹಾಗೂ ಶಲ್ಯ ನೀಡಲಾಗುತ್ತಿದ್ದು, ದೇವರ ದರ್ಶನದ ಬಳಿಕ ವಾಪಾಸ್ ಕೊಡಬೇಕು.
ದೇವಸ್ಥಾನಕ್ಕೆ ಭೇಟಿ ನೀಡುವಾಗ ಭಕ್ತಿ ಭಾವನೆಯಿಂದ ದೇವರ ದರ್ಶನ ಮಾಡಬೇಕು. ಬೇರೆ ರೀತಿಯ ಉಡುಪುಗಳಿಂದ ಧಾರ್ಮಿಕ ಭಾವನೆಗೆ ಧಕ್ಕೆಯುಂಟಾಗಬಾರದು ಎಂಬ ಕಾರಣಕ್ಕೆ ಸದುದ್ದೇಶದಿಂದ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.