![](https://kannadadunia.com/wp-content/uploads/2024/01/JEE-Main-Joint-entrance-exam-btech-barch-nta.png)
ಬೆಂಗಳೂರು : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (ಸಿಎಆರ್/ ಡಿಎಆರ್) (ಪುರುಷ) (ತೃತೀಯ ಲಿಂಗ ಪುರುಷ)-3064 ಹುದ್ದೆಗಳಿಗೆ ರಾಜ್ಯಾದ್ಯಂತ ಜನವರಿ 28 ರ ನಾಳೆ ಬೆಳಿಗ್ಗೆ 11 ಗಂಟೆಯಿಂದ 12.30 ಗಂಟೆಯವರೆಗೆ ಲಿಖಿತ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ನಿಗದಿ ಪಡಿಸಿದ ವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಸೂಚನೆ ನೀಡಲಾಗಿದೆ.
ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಕರೆ ಪತ್ರದ ಬಗ್ಗೆ ಎಸ್.ಎಂ.ಎಸ್ ಮೂಲಕ ಮಾಹಿತಿಯನ್ನು ಡಿ.ಐ.ಜಿ.ಪಿ, ನೇಮಕಾತಿ ಹಾಗೂ ಸಮನ್ವಯಾಧಿಕಾರಿ, ಎಪಿಸಿ ನೇಮಕಾತಿ ಸಮಿತಿ, ಬೆಂಗಳೂರು ರವರ ಕಚೇರಿಯಿಂದ ನೀಡಲಾಗಿದೆ. ಕರೆ ಪತ್ರದ ಲಿಂಕ್ ಅನ್ನು ಸಹ ಕಳುಹಿಸಲಾಗಿದೆ. ಅಭ್ಯರ್ಥಿಗಳು ಕರೆಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನಿಗದಿಪಡಿಸಿದ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗಬೇಕು.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರ ಸಂಹಿತೆಯನ್ನು ನಿಗದಿಪಡಿಸಲಾಗಿದ್ದು, ಪುರುಷ ಮತ್ತು ತೃತೀಯ ಲಿಂಗ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ, ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್ಗಳನ್ನು ಧರಿಸಬೇಕು. ಜಿಪ್ ಪ್ಯಾಕೆಟ್ಗಳು, ದೊಡ್ಡ ಬಟನ್ಗಳು ಇರುವ ಶರ್ಟ್ಗಳನ್ನು, ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್ಗಳನ್ನು ಧರಿಸಬಾರದು. ಪರೀಕ್ಷಾ ಕೇಂದ್ರದೊಳಗೆ ಶೂಗಳನ್ನು ನಿಷೇಧಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆ(ಚಪ್ಪಲಿ) ಯನ್ನು ಧರಿಸಿರಬೇಕು. ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ, ಕಡಗಗಳನ್ನು ಧರಿಸುವುದನ್ನು ನಿಷೇಧಿಸಿದೆ.
ಆದ್ದರಿಂದ ಅಭ್ಯರ್ಥಿಗಳು ಎಚ್ಚರಿಕೆ ವಹಿಸಿ ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.