ಬೆಂಗಳೂರು : ಕರ್ನಾಟಕದ ಶಿಲ್ಪಿ ಅರುಣ್ ಯೋಗಿರಾಜ್ ಈಗ ನ್ಯಾಷನಲ್ ಸ್ಟಾರ್ ಎಲ್ಲೆಲ್ಲೂ ಅರುಣ್ ಯೋಗಿರಾಜ್ ಅವರದ್ದೇ ಗುಣಗಾನ. ಹೌದು, ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ ಈಗ ಮನೆ ಮಾತಾಗಿದ್ದಾರೆ. ಈ ಹಿಂದೆ ಅರುಣ್ ಯೋಗಿರಾಜ್ ಕೆತ್ತಿದ ಶಿಲ್ಪಗಳು ಒಂದೊಂದಾಗಿ ಅನಾವರಗೊಳ್ಳುತ್ತಿದೆ.
ಸಾಹಸ ಸಿಂಹ , ನಟ ವಿಷ್ಣುವರ್ಧನ್ ಅವರ ಪುತ್ಥಳಿ ರಚಿಸಿದ್ದು ಕಲಾಕಾರ ಅರುಣ್ ಯೋಗಿರಾಜ್ ಅವರೇ ಹೌದು. ಮೈಸೂರಿನ ವಿಷ್ಣುವರ್ಧನ್ ಸ್ಮಾರಕದಲ್ಲಿ ತಲೆಯೆತ್ತಿ ನಿಂತಿರುವ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು ತಯಾರು ಮಾಡಿದ್ದು ಇದೇ ಅರುಣ್ ಯೋಗಿರಾಜ್.. ಈ ಮೂಲಕ ಸಿನಿಮಾ ರಂಗದ ಜೊತೆಗೂ ಅರುಣ್ ನಂಟು ಬೆಳೆಸಿಕೊಂಡಿದ್ದಾರೆ.
ಅರುಣ್ ಯೋಗಿರಾಜ್ ಮೈಸೂರಿನ ಒಬ್ಬ ಭಾರತೀಯ ಶಿಲ್ಪಿ. ಅವರು ಕೆತ್ತಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೂರ್ತಿಯನ್ನು ನವದೆಹಲಿಯ ಇಂಡಿಯಾ ಗೇಟ್ ನ ಅಮರ್ ಜವಾನ್ ಜ್ಯೋತಿಯ ಹಿಂಭಾಗದಲ್ಲಿ ಸ್ಥಾಪಿಸಲಾಗಿದೆ. ಇವರು ಕೆತ್ತಿದ ಹಿಂದೂ ದೇವರು ರಾಮನ ಬಾಲ ರೂಪವಾದ ರಾಮ ಲಲ್ಲಾ ವಿಗ್ರಹವನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿದೆ
ಇವರು ಮೈಸೂರಿನ ಅಗ್ರಹಾರದವರು. ಮೈಸೂರು ನಗರದ ಐದು ತಲೆಮಾರಿನ ಶಿಲ್ಪಿಗಳ ಕುಟುಂಬದಿಂದ ಬಂದವರು. ಅರುಣ್ ಅವರ ತಂದೆ ಯೋಗಿರಾಜ್ ಮತ್ತು ತಾತ ಬಸವಣ್ಣ ಶಿಲ್ಪಿ ಕೂಡ ಪ್ರಸಿದ್ಧ ಶಿಲ್ಪಿಗಳು. 2008 ರಿಂದ ಪೂರ್ಣ ಶಿಲ್ಪಕಲೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಅರುಣ್ ತನ್ನ ಎಂಬಿಎ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು .