ಅಯೋಧ್ಯೆ : ಜನವರಿ 22 ರಂದು ನಡೆಯಲಿರುವ ಅಯೋಧ್ಯೆಯ ರಾಮಮಂದಿರದ ರಾಮನ ವಿಗ್ರಹ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ಇಂದಿನಿಂದ ಧಾರ್ಮಿಕ ವಿಧಿವಿಧಾನಗಳು ಅಯೋಧ್ಯೆಯಲ್ಲಿ ಪ್ರಾರಂಭವಾಗಲಿವೆ ಎಂದು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಇಂದಿನಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿ ಜನವರಿ 21 ರವರೆಗೆ ನಡೆಯಲಿವೆ. ಜನವರಿ 22 ರಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮೈಸೂರು ಮೂಲದ ಅರುಣ್ ಯೋಗಿರಾಜ್ ಕೆತ್ತಿಸಿದ ರಾಮ್ ಲಲ್ಲಾ ವಿಗ್ರಹವನ್ನು ಜನವರಿ 18 ರಂದು ದೇವಾಲಯದ ‘ಗರ್ಭ ಗೃಹ’ದಲ್ಲಿ ಇರಿಸಲಾಗುವುದು ಎಂದು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಸೋಮವಾರ ಪ್ರಕಟಿಸಿದೆ.
ರಾಮಮಂದಿರದ ರಾಮನ ವಿಗ್ರಹ ಪ್ರತಿಷ್ಠಾಪನೆ ವೇಳೆ ಪ್ರಧಾನಿ ಮೋದಿ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯ ನಾಥ್, ಉತ್ತರ ಪ್ರದೇಶದ ರಾಜ್ಯಪಾಲರು ಹಾಗೂ ದೇವಸ್ಥಾನದ ಟ್ರಸ್ಟಿಗಳು ಹಾಜರಿರಲಿದ್ದಾರೆ. ಪ್ರಾಣಪ್ರತಿಷ್ಠಾ ಕಾರ್ಯಕ್ರಮ ಮಧ್ಯಾಹ್ನ 12.20ಕ್ಕೆ ಆರಂಭವಾಗಿ 1 ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.