ನವದೆಹಲಿ: ಎನ್ ಬಿರೇನ್ ಸಿಂಗ್ ನೇತೃತ್ವದ ಮಣಿಪುರ ಸರ್ಕಾರ ಬುಧವಾರ ರಾಹುಲ್ ಗಾಂಧಿ ಅವರಿಗೆ ಹಪ್ಟಾ ಕಾಂಗ್ಜೆಬಂಗ್ ಮೈದಾನದಿಂದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪ್ರಾರಂಭಿಸಲು ಅನುಮತಿ ನೀಡಿದೆ.
ಮಣಿಪುರ ರಾಜ್ಯದ ಇಂಫಾಲ್ ಪೂರ್ವ ಜಿಲ್ಲೆಯ ವಿಶ್ವದ ಅತ್ಯಂತ ಹಳೆಯ ಪೊಲೊ ಮೈದಾನಗಳಲ್ಲಿ ಒಂದಾದ ಹಪ್ಟಾ ಕಾಂಗ್ಜೆಬಂಗ್ ಮೈದಾನದಿಂದ ಯಾತ್ರೆಗೆ ಹಸಿರು ನಿಶಾನೆ ತೋರಲು ಕಾಂಗ್ರೆಸ್ ಮಣಿಪುರ ಸರ್ಕಾರವನ್ನು ಸಂಪರ್ಕಿಸಿದ ಎಂಟು ದಿನಗಳ ನಂತರ ಈ ಅನುಮೋದನೆ ಬಂದಿದೆ ಎಂದು ಪಿಟಿಐ ವರದಿ ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಜನವರಿ 14 ರಂದು ಇಂಫಾಲ್ ನಿಂದ ಪ್ರಾರಂಭವಾಗಲಿದ್ದು, ಮಾರ್ಚ್ 20 ರಂದು ಮುಂಬೈನಲ್ಲಿ ಕೊನೆಗೊಳ್ಳಲಿದೆ.
ಇಂಫಾಲ್ ಪೂರ್ವ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಹೊರಡಿಸಿದ ಆದೇಶದಲ್ಲಿ, “ಯಾವುದೇ ಅಹಿತಕರ ಘಟನೆ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ತಡೆಯಲು ಜನವರಿ 14 ರಂದು ಸೀಮಿತ ಸಂಖ್ಯೆಯ ಭಾಗವಹಿಸುವವರೊಂದಿಗೆ ಯಾತ್ರೆಗೆ ಚಾಲನೆ ನೀಡಲು ಮಾತ್ರ ಈ ಮೂಲಕ ಅನುಮತಿಸಲಾಗಿದೆ. ಈ ಕಚೇರಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡಲು ಭಾಗವಹಿಸುವವರ ಸಂಖ್ಯೆ ಮತ್ತು ಹೆಸರನ್ನು ಈ ಕಚೇರಿಗೆ ಮುಂಚಿತವಾಗಿ ಒದಗಿಸಬೇಕು ಎಂದು ಸೂಚನೆ ನೀಡಿದೆ.