ಕಲಬುರಗಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಯುವನಿಧಿ’ ಯೋಜನೆಗೆ ಜನವರಿ12ರಂದು ಶಿವಮೊಗ್ಗದಲ್ಲಿ ಚಾಲನೆ ಸಿಗಲಿದ್ದು, ಉದ್ಯೋಗದ ಹುಡುಕಾಟದಲ್ಲಿರುವ ರಾಜ್ಯದ 5 ಲಕ್ಷಕ್ಕೂ ಹೆಚ್ಚು ಯುವಜನತೆಗೆ ಈ ಯೋಜನೆಯು ನೆರವಾಗಲಿದೆ. ಈ ಯೋಜನೆಗೆ ಸರ್ಕಾರವು ವಾರ್ಷಿಕ ₹ 250 ಕೋಟಿ ನೆರವನ್ನು ಒದಗಿಸಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಯುವನಿಧಿ’ ಯೋಜನೆಯು ಪದವಿ ಹಾಗೂ ಡಿಪ್ಲೋಮಾ ಪೂರ್ಣಗೊಳಿಸಿ ಉದ್ಯೋಗದ ಹುಡುಕಾಟದಲ್ಲಿರುವ ರಾಜ್ಯದ 5 ಲಕ್ಷಕ್ಕೂ ಹೆಚ್ಚು ಯುವಜನತೆಗೆ ಈ ಯೋಜನೆಯು ನೆರವಾಗಲಿದೆ. ಈ ಯೋಜನೆಗೆ ಸರ್ಕಾರವು ವಾರ್ಷಿಕ ₹ 250 ಕೋಟಿ ನೆರವನ್ನು ಒದಗಿಸಲಿದೆ.
ಕಲಬುರಗಿ ಜಿಲ್ಲೆಯಲ್ಲಿ 5 ವಿಶ್ವವಿದ್ಯಾಲಯಗಳು, 6 ಇಂಜಿನಿಯರಿಂಗ್ ಕಾಲೇಜು, 12 ಪಾಲಿಟೆಕ್ನಿಕ್ ಕಾಲೇಜು ಹಾಗೂ 80 ಕ್ಕೂ ಅಧಿಕ ಪದವಿ ಕಾಲೇಜುಗಳಿವೆ. 2022-23 ನೇ ಸಾಲಿನಲ್ಲಿ 9000 ಕ್ಕೂ ಅಧಿಕ ಪದವಿ ಹಾಗೂ ಡಿಪ್ಲೋಮಾ ಪಾಸಾದ ಅಭ್ಯರ್ಥಿಗಳಿದ್ದು ಅವರಲ್ಲಿ ಇದುವರೆಗೆ 1575 ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ. ಪದವಿ ಹಾಗೂ ಡಿಪ್ಲೋಮಾ ಮುಗಿದು ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗವಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದವರು ಈ ಯೋಜನೆಗೆ ಅರ್ಹರಿದ್ದು, ನೋಂದಣಿಗೆ ಯಾವುದೇ ಕಾಲಮಿತಿಯಿಲ್ಲ. ಹಾಗಾಗಿ ನೋಂದಾಯಿಸಿದೆ ಇರುವ ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸುವ ಮೂಲಕ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.