ಕಲಬುರಗಿ : ಕಲಬುರಗಿ ಜಿಲ್ಲೆಗೆ 7,610 ಕೋಟಿ ಬಂಡವಾಳ ಹರಿದು ಬಂದಿದ್ದು, ಶೀಘ್ರವೇ 2,060ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಐಟಿಬಿಟಿ ಇಲಾಖೆ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ‘’ಕಳೆದ ಆರು ತಿಂಗಳುಗಳಿಂದ ನನ್ನ ಇಲಾಖೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಹಾಗೂ ಕೈಗೊಂಡ ಕ್ರಮಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತ ಬಂದಿದ್ದೇನೆ. ಈ ಬಾರಿ ಚಿತ್ತಾಪುರದ ಅಭಿವೃದ್ದಿಗಾಗಿ ₹17.97 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಕೈಗಾರಿಕೆಗಳನ್ನು ಕರೆತರುವ ನಮ್ಮ ಸರ್ಕಾರದ ಪ್ರಯತ್ನದ ಫಲವಾಗಿ ಕಲಬುರಗಿ ಜಿಲ್ಲೆಗೆ ₹7,610 ಕೋಟಿ ಬಂಡವಾಳ ಹೂಡಿಕೆ ಹರಿದು ಬಂದಿದ್ದು ಇದರಿಂದ 2,060ಕ್ಕೂ ಹೆಚ್ಚು ನೂತನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ’’ ಎಂದರು.
ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಯ ಎಲ್ಲಾ ಬರಪೀಡಿತ ತೊಗರಿ ಬೆಳೆಗಾರರಿಗೆ ಮಧ್ಯಂತರ ಪರಿಹಾರವನ್ನು ಒದಗಿಸಲು ₹124 ಕೋಟಿ ಹಣ ಬಿಡುಗಡೆ ಮಾಡಿದ್ದು, ಈಗಾಗಲೇ ಎಲ್ಲಾ ರೈತರ ಖಾತೆಗಳಿಗೂ ಹಣ ಜಮಾ ಮಾಡಲಾಗಿದೆ.ಇನ್ನು ರಾಜ್ಯದ ಯುವಜನತೆಯ ಭವಿಷ್ಯದ ಹಿತದೃಷ್ಟಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ತಡೆಗಟ್ಟಲು ಬೆಳಗಾವಿ ಅಧಿವೇಶನದಲ್ಲಿ ಕರ್ನಾಟಕ ಸಾರ್ವಜನಿಕ ಪರೀಕ್ಷೆ ಅಕ್ರಮ ತಡೆ ಕಾಯ್ದೆ – 2023 ಮಸೂದೆಯನ್ನು ಮಂಡಿಸಿ, ವಿಧಾನಸಭೆ ಹಾಗೂ ವಿಧಾನಪರಿಷತ್’ನಲ್ಲಿ ಅಂಗೀಕಾರಗೊಳಿಸಿ ಕಾನೂನು ಜಾರಿ ಮಾಡಲಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರಬುನಾದಿ ಹಾಕಲಾಗಿದೆ.
ಈ ನೂತನ ವರ್ಷವು ಸರ್ವರಿಗೂ ಒಳಿತನ್ನು ತರಲಿ ಹಾಗೂ ನನ್ನ ಮೇಲೆ ನೀವು ಇಟ್ಟಿರುವ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ ಎಂದು ಆಶಿಸುತ್ತಾ, ಮತ್ತೊಮ್ಮೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ ಎಂದಿದ್ದಾರೆ.