![](https://kannadadunia.com/wp-content/uploads/2021/12/farmers-pm-kisan.png)
ರೈತರು ಬೆಳೆದ ಬೆಳೆಗಳ ಬಗ್ಗೆ ನಿಖರವಾಗಿ ಮಾಹಿತಿ ಪಡೆದುಕೊಳ್ಳಲು ಈಗಾಗಲೇ ಇ-ಆಡಳಿತ ವತಿಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್ ಆ್ಯಪ್ ಮೂಲಕ ಹಿಂಗಾರು ಬೆಳೆ ಸಮೀಕ್ಷೆ ನಡೆಸುವ ಕಾರ್ಯ ಜಿಲ್ಲೆಯಲ್ಲಿ ಡಿಸೆಂಬರ್ 30 ರಿಂದ ಆರಂಭವಾಗಿದ್ದು, ರೈತರು ತಮ್ಮ ಹೊಲಗಳಲ್ಲಿ ಬೆಳೆದ ಬೆಳೆಗಳ ವಿವರ ದಾಖಲಿಸಲು ಆಂಡ್ರಾಯ್ಡ್ ಆ್ಯಪ್ ಮೂಲಕ ವಿವರಗಳನ್ನು ತಾವೇ ಸ್ವತಃ ಮೊಬೈಲ್ ತಂತ್ರಾಂಶದ ಮೂಲಕ ದಾಖಲಿಸಬಹುದಾಗಿದೆ.
ರೈತರು ತಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇಸ್ಟೋರ್ ನಿಂದ ಬೆಳೆ ಸಮೀಕ್ಷೆ ಹಿಂಗಾರು ಹಂಗಾಮಿನ Rabi Season Farmer Crop Survey 2023-24 ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬಹುದಾಗಿದೆ.
ಬೆಳೆ ಸಮೀಕ್ಷೆ ದತ್ತಾಂಶ ಮಾಹಿತಿಯನ್ನು ಬೆಳೆ ವಿಸ್ತರಣೆ ಎಣಿಕೆ ಕಾರ್ಯದಲ್ಲಿ, ಬೆಳೆ ಕಟಾವು ಪ್ರಯೋಗದಲ್ಲಿ, ಪ್ರಕೃತಿ ವಿಕೋಪ ಸಂದರ್ಭದಲ್ಲಿ, ಬೆಳೆಹಾನಿ ವರದಿ ಸಿದ್ದಪಡಿಸಲು, ಬೆಳೆ ವಿಮಾ ಯೋಜನೆ, ಬೆಂಬಲ ಬೆಲೆ ಯೋಜನೆ, ಆರ್.ಟಿ.ಸಿ ಯಲ್ಲಿ ಬೆಳೆ ವಿವರ ದಾಖಲಿಸಲು, ರಾಷ್ಟ್ರೀಯ ಹಾಗೂ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಂಜೂರು ಮಾಡಲು ಬೆಳೆ ಸಮೀಕ್ಷೆ ಮಾಹಿತಿಯನ್ನು ಉಪಯೋಗಿಸಲಾಗುತ್ತಿದೆ. ಜಿಲ್ಲೆಯಲ್ಲಿ 3,38,006 ಬೆಳೆ ತಾಕುಗಳಿದ್ದು, ಈ ತಾಕುಗಳಿಗೆ ರೈತರು ಬೆಳೆಗಳ ಮಾಹಿತಿಯನ್ನು ಸ್ವಯಂ ದಾಖಲಿಸಬೇಕೆಂದು ವಿನಂತಿಸಲಾಗಿದೆ.
ರೈತರು ತಾವೇ ಸ್ವತಃ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ತಾವು ಬೆಳೆದ ಮಾಹಿತಿಯನ್ನು ನಿಖರವಾಗಿ ನೀಡವುದರಿಂದ ಮುಂಬರುವ ವ್ಯತ್ಯಾಸವನ್ನು ತಡೆಯಬಹುದಾಗಿದೆ. ಬೆಳೆ ಸಮೀಕ್ಷೆ ಕೈಗೊಳ್ಳಲು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಪಿ.ಆರ್ ಗಳನ್ನು/ಕೃಷಿ/ತೋಟಗಾರಿಕೆ/ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.