ಹುಬ್ಬಳ್ಳಿ : ಪ್ರೊಫೈಲ್ ಪಿಕ್ ನೋಡಿ ಬೆತ್ತಲಾಗುವ ಯುವಕರೇ ಎಚ್ಚರ..ಮಾಯಾಂಗನೆ ಮೋಹದ ಬಲೆಗೆ ಬಿದ್ದು ಯುವಕನೋರ್ವ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾನೆ.
ಹುಬ್ಬಳ್ಳಿ ಮೂಲದ ಯುವಕನೊಬ್ಬನಿಗೆ ಯುವತಿಯೊಬ್ಬಳು ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದಾಳೆ. ಫೇಸ್ ಬುಕ್ ನಲ್ಲಿ ಪರಸ್ಪರ ಪರಿಚಯ ಮಾಡಿಕೊಂಡ ಇಬ್ಬರ ನಡುವೆ ಸಲುಗೆ ಜಾಸ್ತಿಯಾಗಿದೆ. ನಂತರ ಇಬ್ಬರು ವಾಟ್ಸಾಪ್ ನಂಬರ್ ಬದಲಿಸಿಕೊಂಡು ಚಾಟ್ ಮಾಡಲು ಶುರು ಮಾಡಿದ್ದಾರೆ. ಯುವತಿ ತನ್ನ ಡಿಪಿಗೆ ನಗ್ನ ಫೋಟೋ ಹಾಕಿ ಯುವಕನನ್ನು ಬಲೆಗೆ ಬೀಳಿಸಿದ್ದಾಳೆ.
ಆನ್ಲೈನ್ ಚಾಟ್ನಲ್ಲಿ ಈತನಿಗೆ ಯುವತಿ ಬೆತ್ತಲೆ ವೀಡಿಯೋ ತೋರಿಸಿ ಯಾಮಾರಿಸಿದ್ದಾಳೆ. ಇದರಿಂದ ಈತನೂ ಆನ್ಲೈನ್ ವೀಡಿಯೋ ಕಾಲ್ನಲ್ಲಿ ಬೆತ್ತಲಾಗಿದ್ದಾನೆ. ಇದನ್ನೇ ರೆಕಾರ್ಡ್ ಮಾಡಿಕೊಂಡ ಆಕೆ ಹಣ ನೀಡು ಇಲ್ಲ ಮಾನ ಹರಾಜು ಮಾಡುವೆ ಎಂದು ಬ್ಲಾಕ್ ಮೇಲ್ ಶುರು ಮಾಡಿದ್ದಾಳೆ. ಹಣ ಕೊಡದೇ ಹೋದರೆ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಮರ್ಯಾದೆಗೆ ಅಂಜಿ ಯುವಕ 2 ಲಕ್ಷ 40 ಸಾವಿರ ಹಣ ಕಳುಹಿಸಿದ್ದಾನೆ.
ಬಳಿಕವೂ ಯುವತಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದು, ಬೇರೆ ದಾರಿ ಕಾಣದೇ ಯುವಕ ಪೊಲೀಸರ ಬಳಿ ಮೊರೆಯಿಟ್ಟಿದ್ದಾನೆ. ತಾಯಿ ಚಿಕಿತ್ಸೆಗಾಗಿ ಕೂಡಿಟ್ಟ ಹಣವನ್ನು ಈತ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಒಟ್ಟಿನಲ್ಲಿ ಫೇಸ್ ಬುಕ್ ನಲ್ಲಿ ಅಪರಿಚಿತ ಹುಡುಗಿಯರ ಫೋಟೋ ನೋಡಿ ಸ್ನೇಹ ಬೆಳೆಸುವ ಮುನ್ನ ಪ್ರತಿಯೊಬ್ಬರು ಎಚ್ಚರ ವಹಿಸಬೇಕು.