ಬೆಂಗಳೂರು: ಜೈಲಿನಲ್ಲಿ ಕೈದಿ ಮೃತಪಟ್ಟರೆ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದಿಂದ ಗುರುವಾರ ಹೈಕೋರ್ಟ್ ಗೆ ಈ ಕುರಿತಾಗಿ ಮಾಹಿತಿ ನೀಡಲಾಗಿದ್ದು, ಜೈಲುಗಳಲ್ಲಿ ಅಸಹಜವಾಗಿ ಸಾವನ್ನಪ್ಪಿದ ಕೈದಿಗಳ ಸಂಬಂಧಿಕರು ಅಥವಾ ಉತ್ತರಾಧಿಕಾರಿಗಳಿಗೆ ಪರಿಹಾರ ನೀಡಲು ನೀತಿಯೊಂದನ್ನು ರೂಪಿಸಲಾಗಿದೆ. ಹೊಡೆದಾಟದಿಂದ ಕೈದಿ ಮೃತಪಟ್ಟರೆ ಆತನ ಉತ್ತರಾಧಿಕಾರಿಗೆ 7.50 ಲಕ್ಷ ರೂ., ಆತ್ಮಹತ್ಯೆ ಸೇರಿ ಅಸಹಜವಾಗಿ ಮೃತಪಟ್ಟರೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠದಲ್ಲಿ ಸುಪ್ರೀಂಕೋರ್ಟ್ 2017 ರಲ್ಲಿ ಹೊರಡಿಸಿದ ತೀರ್ಪಿನ ಹಿನ್ನೆಲೆಯಲ್ಲಿ ಕೈದಿಗಳ ಅಸಹಜ ಸಾವಿಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಪಿಎಎಲ್ ಅರ್ಜಿ ವಿಚಾರಣೆ ನಡೆದಿದೆ.
ಸರ್ಕಾರದ ಪರ ವಕೀಲರು ಜೈಲುಗಳಲ್ಲಿ ಅಸಹಜವಾಗಿ ಮೃತಪಟ್ಟ ಕೈದಿಗಳ ಸಂಬಂಧಿಕರು ಅಥವಾ ಉತ್ತರಾಧಿಕಾರಿಗಳಿಗೆ ಪರಿಹಾರ ಪಾವತಿಸಲು ನೀತಿ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ. ಕೈದಿಗಳ ನಡುವೆ ಹೊಡೆದಾಟದಲ್ಲಿ ಕೈದಿ ಮೃತಪಟ್ಟಲ್ಲಿ ಆತನ ಕುಟುಂಬದವರಿಗೆ 7.50 ಲಕ್ಷ ರೂ., ಆತ್ಮಹತ್ಯೆ ಸೇರಿದಂತೆ ಅಸಹಜ ಸಾವು ಸಂಭವಿಸಿದಲ್ಲಿ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದ್ದು, ಇದನ್ನು ಪರಿಗಣಿಸಿದ ಹೈಕೋರ್ಟ್ ಅರ್ಜಿ ಇತ್ಯರ್ಥಪಡಿಸಿದೆ.