ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಶತಾಯುಷಿ ಹೀರಾ ಬೆನ್ ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಬೆಳಗಿನ ಜಾವ 3:30ಕ್ಕೆ ಹೀರಾ ಬೆನ್ ಅವರು ಅನಾರೋಗ್ಯದಿಂದ ನಿಧನರಾಗಿದ್ದು, 9.30 ಗಂಟೆಯೊಳಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಮೋದಿಯವರ ತಾಯಿ ಹೀರಾ ಬೆನ್ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಗಾಂಧಿನಗರದ ಸೆಕ್ಟರ್ 30 ರ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿದೆ. ತಾಯಿ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ನರೇಂದ್ರ ಮೋದಿ ಅವರು ಅಂತಿಮ ವಿಧಿ ವಿಧಾನ ನೆರವೇರಿಸಿದ ನಂತರ ಬೆಳಗ್ಗೆ 10 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಯಥಾಸ್ಥಿತಿಯಾಗಿ ತಮ್ಮ ಕರ್ತವ್ಯ ಮುಂದುವರಿಸಿರುವ ಮೋದಿ ನಿಗದಿಯಂತೆ ದಿನವಿಡೀ ಪಶ್ಚಿಮ ಬಂಗಾಳದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಕರ್ತವ್ಯಕ್ಕೆ ಹಾಜರಾಗುವರು. ಕೆಲ ಹೊತ್ತಿನಲ್ಲಿ ಗುಜರಾತ್ ರಾಜಭವನ ತಲುಪಿದ ಪ್ರಧಾನಿ ಮೋದಿ ರಾಜಭವನದಲ್ಲಿ ಕುಳಿತು ಕಾರ್ಯನಿರ್ವಹಿಸಲಿದ್ದಾರೆ.
ಕೊಲ್ಕತ್ತಾದಲ್ಲಿ ಗಂಗಾನದಿ ಸ್ವಚ್ಛತೆ ಸಂಬಂಧ ಸಭೆ ನಡೆಸುವರು. ಪಶ್ಚಿಮ ಬಂಗಾಳದಲ್ಲಿ 2800 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಭಾಗವಹಿಸುವರು.