ಬೆಳಗಾವಿ: ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ರಾಜ್ಯ ಸರ್ಕಾರಿ ನೌಕರರಿಗೆ ನಿರಾಸೆಯಾಗಿದೆ. ಹಳೆಯ ಪಿಂಚಣಿ ಯೋಜನೆ ಜಾರಿ ತರುವ ಪ್ರಸ್ತಾವನೆ ಸಧ್ಯಕ್ಕೆ ಸರ್ಕಾರದ ಮುಂದಿರುವುದಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ಸಚಿವರು, ಓಪಿಎಸ್ ಜಾರಿ ಪ್ರಸ್ತಾವನೆ ಸಧ್ಯಕ್ಕೆ ಸರ್ಕಾರದ ಮುಂದೆ ಇಲ್ಲ. ಹಣಕಾಸಿನ ನೆರವು ನೋಡಿಕೊಂಡು ಒಪಿಎಸ್ ಜಾರಿ ಬಗ್ಗೆ ಪರಿಶೀಲನೆ ನಡೆಸುವುದಾಗಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದರು.
ಹಳೆಯ ಪಿಂಚಣಿ ಯೋಜನೆಯ ಜಾರಿ ಬಗ್ಗೆ ಆಲೋಚನೆ ಸಧ್ಯಕ್ಕಿಲ್ಲ. ಓಪಿಎಸ್ ಜಾರಿಗೆ ಪದೆಪದೇ ಒತ್ತಾಯಿಸುವುದು ಸೂಕ್ತವಲ್ಲ. ಹೊಸ ಪಿಂಚಣಿ ವ್ಯಾಪ್ತಿಗೆ ಬರುವ ನೌಕರರಿಗೆ ಈಗಾಗಲೇ ಹಲವಾರು ಸೌಲಭ್ಯ ನೀಡಲಾಗಿದೆ. ಒಪಿಎಸ್ ನೀಡುವ ಅವಶ್ಯಕತೆಯಿಲ್ಲ ಎಂದು ಸಮಿತಿ ಕೂಡ ವರದಿ ನೀಡಿದೆ ಎಂದು ತಿಳಿಸಿದರು.