ಇಡ್ಲಿ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಆಹಾರ. ಇದನ್ನು ಜೀರ್ಣಿಸಿಕೊಳ್ಳುವುದು ಸುಲಭ, ಅದಕ್ಕಾಗಿಯೇ ಎಲ್ಲರೂ ಸಾಮಾನ್ಯವಾಗಿ ಬೆಳಗಿನ ಉಪಾಹಾರಕ್ಕೆ ಇಡ್ಲಿ ತಿನ್ನಲು ಇಷ್ಟಪಡುತ್ತಾರೆ. ರವಾ ಇಡ್ಲಿ, ರೈಸ್ ಇಡ್ಲಿ ಅಥವಾ ವೆಜ್ ಇಡ್ಲಿ ಮುಂತಾದ ಹಲವು ಬಗೆಯ ಇಡ್ಲಿಗಳನ್ನು ನೀವು ಸುಲಭವಾಗಿ ಮಾಡಬಹುದು.
ಆಲೂಗಡ್ಡೆ ಇಡ್ಲಿಯನ್ನು ಎಂದಾದರೂ ರುಚಿ ನೋಡಿದ್ದೀರಾ? ಆಲೂಗೆಡ್ಡೆ ಇಡ್ಲಿ ತುಂಬಾ ಮಸಾಲೆಯುಕ್ತವಾಗಿ ಮತ್ತು ರುಚಿಕರವಾಗಿರುತ್ತದೆ, ಮಕ್ಕಳು ಅದನ್ನು ಉತ್ಸಾಹದಿಂದ ತಿನ್ನುತ್ತಾರೆ. ಇದನ್ನು ಮಾಡುವುದು ತುಂಬಾ ಸುಲಭ, ಆದ್ದರಿಂದ ಆಲೂಗಡ್ಡೆ ಇಡ್ಲಿ ಮಾಡುವ ವಿಧಾನವನ್ನು ತಿಳಿಯೋಣ.
ಆಲೂಗಡ್ಡೆ ಇಡ್ಲಿಗೆ ಬೇಕಾಗುವ ಸಾಮಗ್ರಿ: 2 ದೊಡ್ಡ ಗಾತ್ರದ ಆಲೂಗಡ್ಡೆ, ರವೆ 1 ಕಪ್, ಮೊಸರು ½ ಕಪ್, ಎಣ್ಣೆ 2 ಟೀ ಸ್ಪೂನ್, ಸಾಸಿವೆ 1 ಟೀ ಸ್ಪೂನ್, ಜೀರಿಗೆ 1 ಟೀ ಸ್ಪೂನ್, ಗೋಡಂಬಿ 10-12, ಕರಿಬೇವಿನ ಎಲೆಗಳು 7-8, ಹಸಿರು ಮೆಣಸಿನಕಾಯಿ 2, ಉಪ್ಪು 1 ಟೀ ಸ್ಪೂನ್, ಕೊತ್ತಂಬರಿ ಸೊಪ್ಪು 2 ಚಮಚ, ಇನೋ 2 ಟೀಸ್ಪೂನ್.
ಚಟ್ನಿ: 12 ಕೆಂಪು ಮೆಣಸಿನಕಾಯಿಗಳು, ಎಳ್ಳು ¼ ಕಪ್, ಬೆಳ್ಳುಳ್ಳಿ 5-6 ಎಸಳು, ಸಾಸಿವೆ ½ ಟೀ ಸ್ಪೂನ್, ಕಡಲೆ ಬೇಳೆ ½ ಟೀ ಸ್ಪೂನ್, ಉದ್ದಿನಬೇಳೆ ½ ಟೀ ಸ್ಪೂನ್, 4-5 ಕರಿಬೇವಿನ ಎಲೆಗಳು, ಉಪ್ಪು 1 ಟೀ ಸ್ಪೂನ್, ಎಣ್ಣೆ 3 ಟೀ ಸ್ಪೂನ್
ಆಲೂಗಡ್ಡೆ ಇಡ್ಲಿ ಮಾಡುವ ವಿಧಾನ: ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ, ಜೀರಿಗೆ, ಹಸಿಮೆಣಸು, ಕತ್ತರಿಸಿದ ಕರಿಬೇವಿನ ಸೊಪ್ಪು, ಕತ್ತರಿಸಿದ ಹಸಿರು ಮೆಣಸಿನಕಾಯಿ ಸೇರಿಸಿ. ಸುಮಾರು 30 ಸೆಕೆಂಡುಗಳ ಕಾಲ ಚೆನ್ನಾಗಿ ಫ್ರೈ ಮಾಡಿ. ನಂತರ ಅದಕ್ಕೆ ರವೆ ಹಾಕಿ ಮಧ್ಯಮ ಉರಿಯಲ್ಲಿ ಸುಮಾರು 2 ನಿಮಿಷಗಳ ಕಾಲ ಫ್ರೈ ಮಾಡಿ. ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ತುಂಡುಗಳಾಗಿ ಕತ್ತರಿಸಿ ಅದರ ಪ್ಯೂರಿ ತಯಾರಿಸಿ, ಆ ಪ್ಯೂರಿಯನ್ನು ಹುರಿದ ರವಾ ಜೊತೆ ಮಿಕ್ಸ್ ಮಾಡಿಕೊಳ್ಳಿ.
ನಂತರ ಅದಕ್ಕೆ ಮೊಸರು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ 10 ನಿಮಿಷಗಳ ಕಾಲ ಹಾಗೇ ಇರಿಸಿ. ಕೊನೆಯಲ್ಲಿ 2 ಚಮಚ ಇನೋವನ್ನು ಹಾಕಿ ಬೆರೆಸಿಕೊಳ್ಳಿ. ಇಡ್ಲಿ ತಟ್ಟೆಗೆ ತುಪ್ಪ ಸವರಿಕೊಂಡು ಅದರಲ್ಲಿ ಹಿಟ್ಟನ್ನು ಹಾಕಿ ಸುಮಾರು 15 ನಿಮಿಷಗಳ ಕಾಲ ಬೇಯಿಸಿ. ಬಿಸಿ ಬಿಸಿ ಇಡ್ಲಿ ಸಿದ್ಧವಾಗುತ್ತದೆ. ಇದನ್ನು ಚಟ್ನಿ ಜೊತೆಗೆ ಸವಿಯಿರಿ.