ಬೆಂಗಳೂರು: ಹೊಸ ವರ್ಷಾಚರಣೆಗೆ ಎರಡು ದಿನಗಳು ಮಾತ್ರ ಬಾಕಿ ಇದ್ದು, ರಾಜ್ಯ ರಾಜಧಾನಿ ಬೆಂಗಳೂರಿನ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಂಗಳೂರಿನ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ಮಾಲೀಕರು ನಿಯಮ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ 8,500 ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಪಾರ್ಟಿಗೆ ಬರುವಾಗ ಜನರಿಗೆ ಮಾಸ್ಕ್ ಕಡ್ಡಾಯ. ಪಬ್, ಬಾರ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಎಂಟ್ರಿಯಾಗುವಾಗ ಪ್ರತಿಯೊಬ್ಬರೂ ಮಾಸ್ಕ್ ತೆಗೆದು ಮುಖ ತೋರಿಸಬೇಕು. ಮುಖದ ಚಹರೆ ಸಿಸಿಟಿವಿಯಲ್ಲಿ ಸೆರೆಯಾಗಬೇಕು.
ಡಿಸೆಂಬರ್ 31ರಂದು 12ಗಂಟೆಯವರೆಗೆ ಮಾತ್ರ ವರ್ಷಾಚರಣೆಗೆ ಅವಕಾಶ. 1 ಗಂಟೆಯೊಳಗೆ ಹೋಟೆಲ್, ಪಬ್ , ರೆಸ್ಟೋರೆಂಟ್ ಬಂದ್ ಮಾಡಬೇಕು. ವರ್ಷಾಚರಣೆಯಲ್ಲಿ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗೆ ವಿಶೇಷ ನಿಗಾ ವಹಿಸಲಾಗುವುದು ಎಂದು ತಿಳಿಸಿದ್ದಾರೆ.