ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಆಟೋ ಚಾಲಕರ ಮುಷ್ಕರ ಆರಂಭವಾಗಿದೆ. ರ್ಯಾಪಿಡೋ ಬೈಕ್, ಟ್ಯಾಕ್ಸಿ ಆಪ್ ಬ್ಯಾನ್, ಬೌನ್ಸ್ ಎಲೆಕ್ಟ್ರಿಕ್ ಬೈಕ್ ಗೆ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ 11 ಗಂಟೆಗೆ ಬೃಹತ್ ಆಟೋ ರ್ಯಾಲಿ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತಯಾರಿ ನಡೆಸಿದ್ದಾರೆ. ಪ್ರತಿಭಟನೆಗೆ 21 ಆಟೋ ಸಂಘಟನೆಗಳು ಸಾಥ್ ನೀಡಿವೆ.
ಬೆಂಗಳೂರಿನ 2 ಲಕ್ಷದ 10 ಸಾವಿರ ಆಟೋಗಳು ಈಗಾಗಲೇ ಪ್ರತಿಭಟನೆಗೆ ಬೆಂಬಲಿಸಿದ್ದು, ಇಂದು ಬೆಂಗಳೂರಿನಲ್ಲಿ ಆಟೋ ಸಿಗುವುದು ಡೌಟು.
ರ್ಯಾಪಿಡೋ ಬೈಕ್, ಟ್ಯಾಕ್ಸಿ ಸಂಖ್ಯೆ ಹೆಚ್ಚಾಗುತ್ತಿದ್ದು, ಆಟೋ ಚಾಲಕರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಮೊದಲ ಹಂತದಲ್ಲಿ 100-ಇ ಬೈಕ್ ಗಳನ್ನು ರಸ್ತೆಗಿಳಿಸಲು ಬೌನ್ಸ್ ಕಂಪನಿ ಮುಂದಾಗಿದೆ. ಇದರಿಂದಾಗಿ ಆಟೋ ಚಾಲಕರಿಗೆ ಸಂಕಷ್ಟ ಎದುರಾಗಿದೆ. ರ್ಯಾಪಿಡೋ ಬೈಕ್, ಟ್ಯಾಕ್ಸಿ, ಎಲೆಕ್ಟ್ರಿಕ್ ಬೈಕ್ ಗಳಿಗೆ ನೀಡಿರುವ ಅನುಮತಿ ಹಿಂಪಡೆಯುವಂತೆ ಒತ್ತಾಯಿಸಿ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.