ಬೆಂಗಳೂರು: ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದೆ. ಇದಾದ ನಂತರ ಮುಂಬಡ್ತಿಯಲ್ಲಿಯೂ ಮೀಸಲಾತಿ ನಿಗದಿ ಮಾಡಲಾಗಿದ್ದು, ನೇರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ. ಸಾಮಾನ್ಯ ವರ್ಗದ ಮೀಸಲಾತಿಯನ್ನು ಕಡಿತಗೊಳಿಸಿ 44ಕ್ಕೆ ಇಳಿಕೆ ಮಾಡಲಾಗಿದೆ.
ಎಸ್ಸಿ, ಎಸ್ಟಿ ಸಮುದಾಯದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಳಕ್ಕೆ ರೋಸ್ಟರ್ ಬಿಂದುಗಳನ್ನು ಗುರುತಿಸುವ ಕಾರ್ಯವನ್ನು ಸರ್ಕಾರ ಪೂರ್ಣಗೊಳಿಸಿದ್ದು, ಸಾಮಾನ್ಯವಾಗಿ ವರ್ಗದ ಮೀಸಲಾತಿ ಕಡಿತಗೊಳಿಸಿ ಪರಿಶಿಷ್ಟ ಜಾತಿ, ಪಂಗಡದ ಮೀಸಲು ಹೆಚ್ಚಳ ಪ್ರಮಾಣ ಸರಿದೂಗಿಸಲಾಗಿದೆ.
ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಎಲ್ಲಾ ನೇರ ನೇಮಕಾತಿ ಮತ್ತು ಮುಂಬಡ್ತಿ ಪ್ರಕ್ರಿಯೆಗಳು ತಕ್ಷಣದಿಂದಲೇ ಆರಂಭವಾಗಲಿದೆ. ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣವನ್ನು ಶೇಕಡ 15 ರಿಂದ 17ಕ್ಕೆ, ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣವನ್ನು 3ರಿಂದ ಶೇಕಡ 7ಕ್ಕೆ ಹೆಚ್ಚಳ ಮಾಡಲಾಗಿದೆ. ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಇದನ್ನು ಅನುಷ್ಠಾನಗೊಳಿಸಲು ಅಧಿಸೂಚನೆ ಪ್ರಕಟಿಸಲಾಗಿದೆ.
ಎಲ್ಲಾ ಹುದ್ದೆಗಳ ಮೀಸಲಾತಿ ಪ್ರಮಾಣ ಮರು ನಿಗದಿಗೊಳಿಸಿದ್ದು, ಮೀಸಲಾತಿ ಈಗ ಶೇಕಡ 56 ಕ್ಕೆ ಹೆಚ್ಚಳವಾಗಿದೆ. ಸಾಮಾನ್ಯ ವರ್ಗದ ಮೀಸಲಾತಿ ಶೇಕಡ 44ಕ್ಕೆ ಇಳಿಕೆಯಾಗಿದೆ.
ಪರಿಶಿಷ್ಟ ಜಾತಿಗೆ ಶೇಕಡ 17, ಪರಿಶಿಷ್ಟ ಪಂಗಡಕ್ಕೆ ಶೇಕಡ 7, ಸಾಮಾನ್ಯ ವರ್ಗಕ್ಕೆ ಶೇಕಡ 44, ಪ್ರವರ್ಗ 1 ಶೇಕಡ 4, ಪ್ರವರ್ಗ 2ಎ ಶೇಕಡ 15, 2ಬಿ ಶೇಕಡ 4, 3ಎ ಗೆ ಶೇಕಡ 4, 3ಬಿ ಶೇಕಡ 5 ರಷ್ಟು ಮೀಸಲಾತಿ ಇದೆ. ಈಗಾಗಲೇ ಯಾವುದೇ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದಲ್ಲಿ ಅದು ಮುಂದುವರೆಯಲಿದೆ. ಹೊಸ ನೇರ ನೇಮಕಾತಿಗಳಿಗೆ ಮೀಸಲಾತಿ ಹೆಚ್ಚಳ ಅನ್ವಯವಾಗಲಿದೆ ಎಂದು ಹೇಳಲಾಗಿದೆ.