ಬೆಳಗಾವಿ: ಸರ್ಕಾರಿ ಜಮೀನು, ಗೋಮಾಳದಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಪಿ ನಂಬರ್(ಪೈಕಿ ನಂಬರ್) ತೆಗೆದು ಹೊಸ ಸರ್ವೆ ನಂಬರ್ ನೀಡುವ ಪದ್ಧತಿಯನ್ನು ರಾಜ್ಯಾದ್ಯಂತ ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಗೋಮಾಳ, ಜಮೀನುಗಳಲ್ಲಿ ರೈತರು ಕೃಷಿ ಮಾಡುತ್ತಿದ್ದು, ಈ ಭೂಮಿ ಆಧರಿಸಿ ಸಾಲ ಸೇರಿದಂತೆ ಯಾವುದೇ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಕೋಲಾರ ಜಿಲ್ಲೆಯಲ್ಲಿ ಪಿ ನಂಬರ್ ತೆಗೆದು ಹೊಸ ಸರ್ವೆ ನಂಬರ್ ಕೊಡುವ ಮೂಲಕ ಕೆಲವು ಸೌಲಭ್ಯ ಕಲ್ಪಿಸಲಾಗುತ್ತಿದೆ. ಹೀಗಾಗಿ ರಾಜ್ಯಾದ್ಯಂತ ಈ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆದಿದೆ ಎಂದರು.
ಗೋಮಾಳ ಅಥವಾ ಸರ್ಕಾರಿ ಜಮೀನಿನ ಪ್ರಮಾಣ ಇರುವುದಕ್ಕಿಂತ ಕಡಿಮೆ ಜಮೀನನ್ನು ರೈತರಿಗೆ ಕೊಟ್ಟಿದ್ದರೆ ಮಾತ್ರ ಪಿ ನಂಬರ್ ಕೊಡುವ ಚಿಂತನೆ ಇದೆ. ಕೆಲವೆಡೆ ನಕಲಿ ದಾಖಲೆ ಸೃಷ್ಟಿಸಿದ ಪರಿಣಾಮ ಗೋಮಾಳ ಪ್ರದೇಶ ಇರುವ ವಿಸ್ತೀರ್ಣಕ್ಕಿಂತ ಹೆಚ್ಚು ಪ್ರದೇಶದ ಹಕ್ಕು ಕೇಳಿ ಅರ್ಜಿ ಸಲ್ಲಿಸಲಾಗುತ್ತಿದೆ. ಇಂತಹ ಕಡೆ ಪಿ ನಂಬರ್ ಕೊಡುವುದು ಕಷ್ಟವಾಗಿದೆ. ಇದಕ್ಕಾಗಿ ಸರ್ವೇ ಕಾರ್ಯ ಕೈಗೊಳ್ಳಲಾಗುವುದು ಹೊಸ ಕಾಯ್ದೆ ಜಾರಿಗೆ ತರಲು ಜನಪ್ರತಿನಿಧಿಗಳ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.