ಬೆಳಗಾವಿ: ಜೆಡಿಎಸ್ ನವರಿಗೆ 5 ಜಿಲ್ಲೆಗಳನ್ನು ಕಳೆದುಕೊಳ್ಲುವ ಭೀತಿ ಇದೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸಿದ್ಧಾಂತಗಳ ಮೇಲೆ ಚುನಾವಣೆ ಎದುರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಹಳೆ ಮೈಸೂರು ಭಾಗದ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿಯವರ ಎಲ್ಲಾ ಹೇಳಿಕೆಗಳಿಗೂ ಪ್ರತಿಕ್ರಿಯೆ ಕೊಡಬೇಕಾಗಿಲ್ಲ. ರಾಜ್ಯದ ಯಾವುದೇ ಜಿಲ್ಲೆಯನ್ನು ಯಾರಿಗೂ ಜಹಗೀರ್ ಕೊಟ್ಟಿಲ್ಲ. ಯಾವ ಜಿಲ್ಲೆಯೂ ಯಾರಪ್ಪನ ಆಸ್ತಿಯೂ ಅಲ್ಲ. ಪ್ರಜಾಪ್ರಭುತ್ವದಲ್ಲಿ ಜಹಗೀರ್ ಇರಲು ಸಾಧ್ಯವಿಲ್ಲ. ಮಂಡ್ಯ ಯಾರ ಆಸ್ತಿಯೂ ಅಲ್ಲ, ಇದು ಹೆಚ್.ಡಿ.ಕೆಗೂ ಗೊತ್ತು ಎಂದು ಟಾಂಗ್ ನೀಡಿದರು.
ಜೆಡಿಎಸ್ ನವರಿಗೆ 5 ಜಿಲ್ಲೆಗಳನ್ನು ಕಳೆದುಕೊಳ್ಳುವ ಭೀತಿ ಇದೆ. ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರದಲ್ಲಿಯೂ ನಾವು ಗೆಲ್ಲುತ್ತೇವೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಿದ್ಧಾಂತದ ಮೂಲಕ ಚುನಾವಣೆ ಎದುರಿಸುತ್ತದೆ. ಬಿಜೆಪಿ ಜಾತಿಯಡಿಯಲ್ಲ, ಹಿಂದೂತ್ವದ ಅಡಿಯಲ್ಲಿ ಬೆಳೆದಿದೆ. ಅದೇ ಸಿದ್ಧಾಂತ ಹಾಗೂ ಅಭಿವೃದ್ಧಿ ವಿಚಾರಗಳ ಅಡಿಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ನಾಳೆ ಅಮಿತ್ ಶಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ನಾಳೆಯಿಂದ ಮೂರು ದಿನಗಳ ಕಾಲ ಕರ್ನಾಟಕ ಪ್ರವಾಸ ಮಾಡುತ್ತಾರೆ. ಅಮಿತ್ ಶಾ ಒಳ್ಳೆಯ ಆಟಗಾರ ಯಾವ ಪಿಚ್ ಆದ್ರೂ ಆಡುತ್ತಾರೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಬದಲಾವಣೆ ತಂದಿದ್ದಾರೆ. ಅಮಿತ್ ಶಾ ಬಂದರೆ ಕಾರ್ಯಕರ್ತರಿಗೆ ವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು.