ಕಾರವಾರ: ಬಿಸಿಯೂಟದ ಸಾಂಬಾರ್ ನಲ್ಲಿ ಇಲಿ ಸತ್ತು ಬಿದ್ದಿರುವ ವಿಚಾರ ಗೊತ್ತಿದ್ದರೂ ಮಕ್ಕಳಿಗೆ ಅದೇ ಸಾಂಬಾರ್ ಬಡಿಸಿದ ಘಟನೆ ಸೋಮವಾರ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಪೋಷಕರು ಶಿಕ್ಷಕರು ಹಾಗೂ ಶಾಲಾಡಳಿತ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸೋಮವಾರ ಬಿಸಿಯೂಟದ ಸಾಂಬಾರ್ ನಲ್ಲಿ ಇಲಿ ಬಿದ್ದಿದ್ದು, ಊಟ ಸೇವಿಸಿದ ಬಾಲಕನೊಬ್ಬ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ವಿಚಾರ ಆತನ ಸಹಪಾಠಿಗಳಿಗೆ ಗೊತ್ತಾಗಿ ಶಿಕ್ಷಕರು ಮತ್ತು ಅಡುಗೆಯವರಿಗೆ ವಿಷಯ ತಿಳಿಸಿದ್ದಾರೆ.
ಆದರೆ, ಅದೇ ಸಾಂಬಾರ್ ಅನ್ನು ಮಕ್ಕಳಿಗೆ ಬಡಿಸಲಾಗಿದೆ. ಪೋಷಕರಿಗೆ ವಿಷಯ ತಿಳಿಸದಂತೆ ಬೆದರಿಕೆ ಹಾಕಲಾಗಿದೆ. ಕೆಲವು ಮಕ್ಕಳು ಮನೆಗೆ ಹೋದ ನಂತರ ಪೋಷಕರ ಬಳಿ ವಿಷಯ ತಿಳಿಸಿದ್ದರಿಂದ ಆಕ್ರೋಶಗೊಂಡ ಪೋಷಕರು ಪ್ರಶ್ನಿಸಿದ್ದಾರೆ. ಇಂತಹ ಕೃತ್ಯವೆಸಗಿದ ಶಾಲೆಯ ಶಿಕ್ಷಕರು, ಅಡುಗೆ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.