ಚೀನಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳ ಜನರನ್ನು ಮತ್ತೆ ಚಿಂತೆಗೀಡು ಮಾಡಿದೆ. ಕೊರೊನಾದ ಹೊಸ ಅಲೆ ಬರದಂತೆ ತಡೆಯಲು ಭಾರತದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗ್ತಿದೆ. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ತಜ್ಞರು ಕೂಡ ಸಲಹೆ ನೀಡಿದ್ದಾರೆ. ಸಂಶೋಧನೆಯ ಪ್ರಕಾರ ಪ್ರತಿ 3 ತಿಂಗಳ ನಂತರ ಲಸಿಕೆ ಪ್ರಮಾಣಕ್ಕೆ ಪ್ರತಿಕಾಯವು ಕಡಿಮೆಯಾಗುತ್ತದೆ. ಹಾಗಾಗಿ 3 ತಿಂಗಳ ಹಿಂದೆ ಲಸಿಕೆಯನ್ನು ಪಡೆದವರು ಮೂರನೇ ಡೋಸ್ ಅಥವಾ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು.
ಬೂಸ್ಟರ್ ಡೋಸ್ ಏಕೆ ಅಗತ್ಯ?
ತಜ್ಞರ ಪ್ರಕಾರ ಕರೋನಾ ವೈರಸ್ ಮತ್ತು ಅದರ ಹೊಸ ರೂಪಾಂತರಗಳಿಂದ ಪಾರಾಗಲು ನಾವು ಯಾವಾಗಲೂ ಕೋವಿಡ್-19 ಸ್ನೇಹಿ ನಡವಳಿಕೆಯನ್ನು ಅನುಸರಿಸಬೇಕು. ಹೊರಗೆ ಹೋದಾಗಲೆಲ್ಲಾ ಮುಖಕ್ಕೆ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಬೂಸ್ಟರ್ ಡೋಸ್ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಕೊರೋನಾ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಬೂಸ್ಟರ್ ಡೋಸ್ ಪಡೆಯುವಂತೆ ತಜ್ಞರು ಸಲಹೆ ನೀಡಿದ್ದಾರೆ.
ಭಾರತ ಸರ್ಕಾರದ ಸಿದ್ಧತೆಗಳೇನು ?
ಚೀನಾದಲ್ಲಿ ಕೋವಿಡ್ ನಿಯಂತ್ರಣ ತಪ್ಪಿದೆ. ಅಲ್ಲಿನ ದುಸ್ಥಿತಿಯನ್ನು ಗಮನಿಸಿದ ಭಾರತ ಸರ್ಕಾರ ಮೊದಲೇ ಅಲರ್ಟ್ ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ದೇಶಾದ್ಯಂತ ಆಸ್ಪತ್ರೆಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸ್ತಾ ಇದೆ. ಅಣಕು ಡ್ರಿಲ್ ಮೂಲಕ ಆಸ್ಪತ್ರೆಗಳಲ್ಲಿ ಪರೀಕ್ಷೆ ಮತ್ತು ಇತರ ರೀತಿಯ ಸಿದ್ಧತೆಗಳನ್ನು ಪರೀಕ್ಷಿಸಲಾಗುತ್ತಿದೆ.
ಭಾರತೀಯ ವೈದ್ಯಕೀಯ ಸಂಘದ ಮಾರ್ಗಸೂಚಿಗಳು
ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಸಾಬೂನು ಮತ್ತು ನೀರು ಅಥವಾ ಸ್ಯಾನಿಟೈಸರ್‌ನಿಂದ ನಿಯಮಿತವಾಗಿ ಕೈಗಳನ್ನು ತೊಳೆಯುತ್ತಿರಿ. ಮದುವೆಗಳು, ರಾಜಕೀಯ ಅಥವಾ ಸಾಮಾಜಿಕ ಸಭೆಗಳು ಮುಂತಾದ ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಿ. ಅಂತರಾಷ್ಟ್ರೀಯ ಪ್ರಯಾಣವನ್ನು ತಪ್ಪಿಸಿ. ಜ್ವರ, ಗಂಟಲು ನೋವು, ಕೆಮ್ಮು, ಲೂಸ್ ಮೋಷನ್ ಮೊದಲಾದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಮುನ್ನೆಚ್ಚರಿಕೆಯ ಡೋಸ್ ಜೊತೆಗೆ ನಿಮ್ಮ ಕೋವಿಡ್ ವ್ಯಾಕ್ಸಿನೇಷನ್ ಅನ್ನು ಸಾಧ್ಯವಾದಷ್ಟು ಬೇಗ ತೆಗೆದುಕೊಳ್ಳಿ. ಕಾಲಕಾಲಕ್ಕೆ ಸರ್ಕಾರ ನೀಡುವ ಸಲಹೆಯನ್ನು ಅನುಸರಿಸಿ.