ತನ್ನ ಮಗಳ ಅಶ್ಲೀಲ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನ್ನ ಪ್ರಶ್ನಿಸಿದ್ದಕ್ಕೆ ಗಡಿ ಭದ್ರತಾ ಸಿಬ್ಬಂದಿಯನ್ನು (ಬಿಎಸ್‌ಎಫ್) ಹೊಡೆದು ಕೊಂದ ಆರೋಪದ ಮೇಲೆ ಏಳು ಜನರನ್ನು ಬಂಧಿಸಲಾಗಿದೆ. ಗುಜರಾತ್‌ನ ನಾಡಿಯಾಡ್‌ನಲ್ಲಿ ಬಿಎಸ್ಎಫ್ ಯೋಧನನ್ನು ಹತ್ಯೆ ಮಾಡಲಾಗಿತ್ತು.
ಮೂಲಗಳ ಪ್ರಕಾರ, ಬಿಎಸ್‌ಎಫ್ ಸಿಬ್ಬಂದಿ ಮೆಲ್ಜಿಭಾಯ್ ವಘೇಲಾ ಅವರು 15 ವರ್ಷದ ಯುವಕನ ಮನೆಗೆ ಭೇಟಿ ನೀಡಿದ್ದರು. ಬಾಲಕನ ಕುಟುಂಬದ ಜೊತೆ ಮಾತನಾಡುತ್ತಾ ನಮ್ಮ ಮಗಳ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನ್ನ ಪ್ರಶ್ನಿಸಿದ್ದರು. ಈ ವೇಳೆ ನಡೆದ ವಾಗ್ವಾದದಲ್ಲಿ ಬಾಲಕನ ಕುಟುಂಬದ ಸದಸ್ಯರು ವಘೇಲಾ ಮೇಲೆ ಹಲ್ಲೆ ನಡೆಸಿದ್ದರು.
ಬಾಲಕ ಬಿಎಸ್‌ಎಫ್ ಯೋಧನ ಮಗಳ ಶಾಲಾ ಸಹಪಾಠಿಯಾಗಿದ್ದು, ಇಬ್ಬರೂ ಸಂಬಂಧದಲ್ಲಿದ್ದರು.
ಪ್ರಕರಣ ಸಂಬಂಧ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ವಿ.ಆರ್.ಬಾಜಪೇಯ್ ಖಚಿತಪಡಿಸಿದ್ದಾರೆ.
ವಘೇಲಾ, ಅವರ ಪತ್ನಿ, ಇಬ್ಬರು ಪುತ್ರರು ಮತ್ತು ಸೋದರಳಿಯ ಚಕ್ಲಾಸಿ ಗ್ರಾಮದ ಯುವಕನ ಮನೆಗೆ ಹೋಗಿದ್ದರು ಎಂದು ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ತಿಳಿಸಿದೆ.
ವಿಡಿಯೋ ವಿರೋಧಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದಾಗ ಬಾಲಕನ ಸಂಬಂಧಿಕರು ಅವರನ್ನು ನಿಂದಿಸಲು ಆರಂಭಿಸಿದ್ದರು. ಬಿಎಸ್ಎಫ್ ಯೋಧ ಆಕ್ಷೇಪಿಸಿದಾಗ ಬಾಲಕನ ಕುಟುಂಬ ಸದಸ್ಯರು ದಾಳಿ ಮಾಡಿದ್ದರು. ಹಲ್ಲೆಗೊಳಗಾಗಿದ್ದ ಬಿಎಸ್ಎಫ್ ಯೋಧ ಮೃತಪಟ್ಟಿದ್ದರು.