ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 40% ಕಮಿಷನ್ ಸರ್ಕಾರ, ನೇಮಕಾತಿ ಹಗರಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮೊಹಮ್ಮದ್ ನಲಪಾಡ್ ಹಾಗೂ ನೂರಾರು ಕಾರ್ಯಕರ್ತರು ವಿಧನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಯತ್ನಿಸುತ್ತಿದ್ದಂತೆ ನೂಕು ನುಗ್ಗಲು ಉಂಟಾಗಿದೆ. ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಪೊಲೀಸರ ಲಾಠಿ ಏಟಿನಿಂದ ತಪ್ಪಿಸಿಕೊಳ್ಳಲು ಓಡಿದ ಕಾಂಗ್ರೆಸ್ ಕಾರ್ಯಕರ್ತನೊಬ್ಬ ರಸ್ತೆ ಪಕ್ಕದಲ್ಲಿದ್ದ 8 ಅಡಿ ಆಳದ ಚರಂಡಿಗೆ ಬಿದ್ದ ಘಟನೆ ನಡೆದಿದೆ.
ತಕ್ಷಣ ಪೊಲೀಸ್ ಸಿಬ್ಬಂದಿಗಳು ಹರಸಾಹಸಪಟ್ಟು ಕಾಂಗ್ರೆಸ್ ಕಾರ್ಯಕರ್ತನನ್ನು ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.