ಸಾಮಾನ್ಯವಾಗಿ ಸಿಕ್ಕಾಪಟ್ಟೆ ಖುಷಿಯಾಗಿ ಇರುವಾಗ ಜನರು ಹಾಡನ್ನು ಗುನುಗುನಿಸಬಹುದು. ಸೀಟಿ ಹೊಡೆಯಬಹುದು. ಒಂದೆರಡು ಸ್ಟೆಪ್ ಹಾಕಬಹುದು. ಹಾಗೇ ಕೆಲವರು ತುಂಬಾ ಖುಷಿಯಾದಾಗ ಡಾನ್ಸ್ ಮಾಡುತ್ತಾರೆ. ಅವರೇನೂ ಶಾಸ್ತ್ರ ಬದ್ಧವಾಗಿ ಡಾನ್ಸ್ ಕಲಿತಿರುವುದಿಲ್ಲ. ಆದರೂ, ಜನ ನನ್ನ ಡಾನ್ಸ್ ನೋಡಿ ಏನನ್ನುತ್ತಾರೋ ಎಂದು ತಲೆ ಕೆಡಿಸಿಕೊಳ್ಳದೆ, ಬಿಂದಾಸ್ ಆಗಿ ತಮಗೆ ತೋಚಿದ ಹಾಗೆ ಸ್ಟೆಪ್ಸ್ ಹಾಕುತ್ತಾರೆ. ಈಗ ಸಂತೋಷದ ಪರಮಾನಂದದಲ್ಲಿ ತೇಲಾಡುತ್ತಿರುವ ಅಂಕಲ್ ಒಬ್ಬರು ಪಾರ್ಟಿ ಒಂದರಲ್ಲಿ ಹಾಕಿರುವ ಡಾನ್ಸ್ ಸ್ಟೆಪ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು. ಮೈ ಚಳಿ ಬಿಟ್ಟು ಕುಣಿಯುತ್ತಿರುವ ಮಧ್ಯವಯಸ್ಸಿನ ವ್ಯಕ್ತಿಯೊಬ್ಬರು ‘ಯಾರ್ ಮೇರಾ ತಿತಿಲಿಯ ವರ್ಗಾ’ ಹಾಡಿಗೆ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ. ಹೀಗೆ ಡಾನ್ಸ್ ಮಾಡುವಾಗ ಅವರು ತಮ್ಮನ್ನ ತಾವು ಮರೆತು ಡಾನ್ಸ್ ಮಾಡುತ್ತಾ ಇದ್ದಾಗ ನೆರೆದ ಜನರೆಲ್ಲಾ ಚಪ್ಪಾಳೆ, ಶಿಳ್ಳೆ, ಕೇಕೆ ಹಾಕುತ್ತಾ ತಾವು ಎಂಜಾಯ್ ಮಾಡುತ್ತಿರೋ ದೃಶ್ಯ ನೋಡಬಹುದು.
ಸಮಾಜ ಏನನ್ನಬಹುದು ಅನ್ನೋ ಗೋಜಿಗೆ ಹೋಗದೆ, ತಾವು ಕುಣಿದು, ಸುತ್ತಮುತ್ತ ಇರುವವರನ್ನು ಖುಷಿ ಪಡಿಸಿದ ಅಂಕಲ್ ಈಗ ಫುಲ್ ಸುದ್ದಿಯಲ್ಲಿ ಇದ್ದಾರೆ.