ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಹೊಸ ಪಕ್ಷ ಸ್ಥಾಪನೆ ಮಾಡಿದ್ದು, ಆಪ್ತ ಗೆಳೆಯನ ನಿರ್ಧಾರಕ್ಕೆ ಸಚಿವ ಶ್ರೀರಾಮುಲು ಇಕ್ಕಟ್ಟಿಗೆ ಸಿಲುಕಿದಂತಿದೆ. ಜನಾರ್ಧನ ರೆಡ್ಡಿ ಹೊಸ ಪಕ್ಷದ ಬಗ್ಗೆ ಯಾವುದೇ ಚರ್ಚೆಯನ್ನೂ ಮಾಡಲ್ಲ ಎಂದು ಶ್ರೀರಾಮುಲು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಜನಾರ್ಧನ ರೆಡ್ಡಿ ಹೊಸ ಪಕ್ಷದ ಬಗ್ಗೆ, ಅವರ ನಿರ್ಧಾರದ ಬಗ್ಗೆ ಅನಾಲಿಸಿಸ್ ಕೂಡ ಮಾಡಲ್ಲ, ಹೊಸ ಪಕ್ಷ ಸ್ಥಾಪನೆ ಮಾಡಿದ್ದು ಒಳ್ಳೆಯದ ಕೆಟ್ಟದ್ದ ಎಂಬುದನ್ನೂ ಚರ್ಚೆ ಮಾಡಲು ಹೋಗಲ್ಲ. ರಾಜಕೀಯವೇ ಬೇರೆ, ಗೆಳತನವೇ ಬೇರೆ. ರಾಜಕೀಯದ ಹೊರತಾಗಿಯೂ ನಮ್ಮ ಸಂಬಂಧಗಳು ಇರುತ್ತವೆ ಎಂದು ಹೇಳಿದ್ದಾರೆ.
ಜನಾರ್ಧನ ರೆಡ್ಡಿ ಪಕ್ಷದ ಬಗ್ಗೆ ಪಕ್ಷದ ಮುಖಂಡರೊಂದಿಗೆ ಮಾತನಾಡುತ್ತೇನೆ. ಈಗ ಸಿದ್ಧಾಂತಗಳೇ ಬೇರೆ ಆದಾಗ ಮನವೊಲಿಸಿದರೂ ಹೇಗೆ? ಜನಾರ್ಧನ ರೆಡ್ದಿ ನನ್ನ ಆತ್ಮೀಯ ಸ್ನೇಹಿತರಾಗಿದ್ದರೂ ಇಂದು ಅವರು ಹೊಸ ಪಕ್ಷ ರಚನೆ ಮಾಡಿದ್ದಾರೆ. ಹಾಗಾಗಿ ಅವರ ಸಿದ್ಧಾಂತವೇ ಬೇರೆ, ನಮ್ಮ ಪಕ್ಷದ ಸಿದ್ಧಾಂತವೇ ಬೇರೆ. ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ಇದರಲ್ಲಿ ಯಾವುದೇ ಗೊಂದಲವೂ ಇಲ್ಲ, ಕಾರ್ಯಕರ್ತರೂ ನಮ್ಮ ಜೊತೆಗಿದ್ದಾರೆ. ಬಿಜೆಪಿಯ ತತ್ವಸಿದ್ಧಾಂತಕ್ಕೆ ಒತ್ತುನೀಡಿ 2023ರಲ್ಲಿಯೂ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು.