ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಬಿಜೆಪಿ ತೊರೆದು ಹೊಸ ಪಕ್ಷ ರಚನೆ ಮೂಲಕ ವಿಧಾನಸಭಾ ಚುನಾವಣೆ ಅಖಾಡಕ್ಕೆ ಮತ್ತೆ ಧುಮುಕಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ರೆಡ್ಡಿ ರಾಜಕೀಯ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಊಹಾಪೋಹಗಳಿಗೆ ತೆರೆ ಎಳೆದಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಜನಾರ್ಧನ ರೆಡ್ಡಿ ತಮ್ಮ ಹಾಗೂ ಸಚಿವ ಶ್ರೀರಾಮುಲು ಅವರ ಗೆಳೆತನ, ಆತ್ಮೀಯತೆ, ಹಳೆಯ ದಿನಗಳ ಬಗ್ಗೆ ಮೆಲುಕು ಹಾಕಿದರು. ಶ್ರೀರಾಮುಲು ಮೊದಲ ಬಾರಿ ಪರಿಚಯವಾದಾಗ ಅವರಿಗೆ 17 ವರ್ಷ ನನಗೆ 21 ವರ್ಷ. ರಾಮುಲು ಸೋದರ ಮಾವ ಸಾರ್ವಜನಿಕ ಜೀವನದಲ್ಲಿದ್ದವರು. ರಾಜೀವ್ ಗಾಂಧಿಯವರು ರಾಮುಲು ಸೋದರ ಮಾವನನ್ನು ಗುರುತಿಸಿದ್ದರು. ಶ್ರೀರಾಮುಲು ಮೇಲೆಯೂ ಶತ್ರುಗಳ ಕಣ್ಣಿತ್ತು. ನಂತರ ಶ್ರೀರಾಮುಲು ನನ್ನ ಆಶ್ರಯಕ್ಕೆ ಬಂದರು. ನಗರ ಸಭೆ ಸದಸ್ಯರಾಗಿ ಆಯ್ಕೆಯಾದರು. ಶಾಸಕನಾಗಿ ಆಯ್ಕೆಯಾದರು. ಶ್ರೀರಾಮುಲು ಬಡವರ ಪರ ಇರುವ ನಾಯಕ. ರಾಜೀವ್ ಗಾಂಧಿ ಬಳ್ಳಾರಿಗೆ ಬಂದಾಗ ರಾಮುಲುಗೆ ಹಾರ ಹಾಕಿ ಸನ್ಮಾನಿಸಿದ್ದರು. ಆಗ ಇದು ದೊಡ್ಡ ಸುದ್ದಿಯಾಗಿತ್ತು.
ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆಗ ರಾಮುಲುಗೆ ಆತಂಕ ಶುರುವಾಗಿತ್ತು. ಸುಷ್ಮಾ ಸ್ವರಾಜ್ ಬಳ್ಳಾರಿಯಿಂದ ಸ್ಪರ್ಧಿಸಿದರು. ನಂತರ ನಡೆದ ಬೆಳವಣಿಗೆಗಳು ಇತಿಹಾಸ. ಸುಷ್ಮಾ ಸ್ವರಾಜ್ ಆಶೀರ್ವಾದದಿಂದ ನಾವು ಬಿಜೆಪಿ ಸೇರಿದ್ದೆವು. ನಮ್ಮದು ಹಾಗೂ ಸುಷ್ಮಾ ಸ್ವರಾಜ್ ಅವರದ್ದು ತಾಯಿ-ಮಗನ ಸಂಬಂಧ. ಮುಂದೆ 2008ರಲ್ಲಿ ಯಡಿಯೂರಪ್ಪ ಸಿಎಂ ಆದರು. ಬಳಿಕ ನಾನು ಬೇಡ ಎಂದು ಹೇಳಿದರೂ ಯಡಿಯೂರಪ್ಪನವರು ನನ್ನನ್ನು ಮಂತ್ರಿ ಮಾಡಿದರು. ಒಂದೇ ಕುಟುಂಬದ ಮೂವರು ಮಂತ್ರಿಗಳಾಗಿದ್ದೆವು. ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಜೆಡಿಯುಗೆ ಬನ್ನಿ ಒಳ್ಳೆ ಭವಿಷ್ಯವಿದೆ ಎಂದಿದ್ದರು. ಆದರೆ ನಾನು ಬಿಜೆಪಿ ಎಂದಿಗೂ ಬಿಡಲ್ಲ ಎಂದು ಹೇಳಿದ್ದೆ. ಬಳ್ಳಾರಿ ಜಿಲ್ಲೆಯನ್ನು ಬಿಜೆಪಿಮಯ ಮಾಡಿದ್ದು ಈ ಜನಾರ್ಧನ ರೆಡ್ದಿ. ಈಗಲೂ ನಾನು ಬಿಜೆಪಿಯನ್ನು ಬಿಡುವ ಪ್ರಶ್ನೆಯೇ ಇಲ್ಲ. ಬಳ್ಳಾರಿ ಜನತೆಯ ಸೇವೆಗೆ ಸದಾ ಸಿದ್ಧ ಎಂದರು.
ನನ್ನ ಬೆಳವಣಿಗೆ ಸಹಿಸದೇ ಅಕ್ರಮ ಗಣಿಗಾರಿಕೆ ನೆಪದಲ್ಲಿ ನನ್ನನ್ನು ಬಂಧಿಸಿದರು. ಉದ್ದೇಶ ಪೂರ್ವಕವಾಗಿ ಇದರಲ್ಲಿ ನನ್ನನ್ನು ಸಿಲುಕಿಸಲಾಯಿತು. ರಾಜಕೀಯ ಶತ್ರುಗಳು ನನ್ನ ವಿರುದ್ಧ ಅಪಪ್ರಚಾರ ಮಾಡಿದರು. ನನ್ನನ್ನು ತಡೆಯಲು ಸಾಕಷ್ಟು ಬಾರಿ ಐಟಿ ದಾಳಿ ಮಾಡಿದರು. ನಾನು ಯಾವುದೇ ಅಕ್ರಮ ಗಣಿಗಾರಿಕೆ ಮಾಡಿಲ್ಲ. ಸಾಕಷ್ಟು ತೊಂದರೆಯನ್ನು ಕೊಟ್ಟರು. ರಾಜಕೀಯವಾಗಿ ನನ್ನನ್ನು ಮುಗಿಸುವ ಪ್ಲಾನ್ ಆಗಿತ್ತು. ಕಷ್ಟಕಾಲದಲ್ಲಿ ಯಾರೂ ನನ್ನ ಜೊತೆ ಇರಲಿಲ್ಲ. ಯಡಿಯೂರಪ್ಪ, ಶೆಟ್ಟರ್ ನೆರವಿಗೆ ಬಂದು ನನ್ನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಚಿವನಾಗಿದ್ದಾಗ ಶಿವಮೊಗ್ಗ-ಮೈಸೂರು ನಡುವೆ ಹೆಲಿ ಟೂರಿಸಂ ಕನಸು ಕಂಡವನು ನಾನು. ರಾಜ್ಯದ ನಾಲ್ಕು ಕಡೆಗಳಲ್ಲಿ ಹೆಲಿ ಟೂರಿಸಂ ಗೆ ಮುಂದಾಗಿದ್ದೆ. ಬಸವಣ್ಣನವರ ಪುತ್ಥಳಿ ನಿರ್ಮಾಣದ ಕನಸಿತ್ತು. ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಬೇಕೆಂದಿದ್ದೆ. ಕರ್ನಾಟಕವನ್ನು ವಿಶ್ವಕ್ಕೆ ತೋರಿಸಬೇಕು ಎಂದುಕೊಂಡಿದ್ದೆ. ಭಗವಂತನ ಮೇಲೆ ಆಣೆಯಾಗಿಯೂ ನಾನು ಎಂದಿಗೂ ಅಕ್ರಮ ಗಣಿಗಾರಿಕೆ ಮಾಡಿರಲಿಲ್ಲ. ರಾಜಕೀಯದ ಜೊತೆ ಗಣಿ ವ್ಯವಹಾರ ಮಾಡಿದ್ದೆ ಎಂದು ತಿಳಿಸಿದ್ದಾರೆ.
ಯಾವ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಡುವುದಿಲ್ಲ. ಬಳ್ಳಾರಿ ಜನರ ಸೇವೆಗೆ ಸದಾ ಸಿದ್ಧ ಎಂದು ಹೇಳುವ ಮೂಲಕ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.