ಬೆಂಗಳೂರು: ನಗರಸಭೆ ಪುರಸಭೆಗಳ ವ್ಯಾಪ್ತಿಯಲ್ಲಿ ಜಾಹೀರಾತು ಹೋರ್ಡಿಂಗ್ಸ್ ಗಳಿಗೆ ತೆರಿಗೆ ವಿಧಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ. ಈಗಾಗಲೇ ತೆರಿಗೆ ಸಂಗ್ರಹಿಸಿದ್ದಲ್ಲಿ ತೆರಿಗೆ ಹಣವನ್ನು ಮರಳಿಸಬೇಕು ಎಂದು ಸೂಚಿಸಿದೆ.
ನಗರ ಸ್ಥಳೀಯ ಸಂಸ್ಥೆಗಳು ಜಾಹೀರಾತು ವಿಚಾರಕ್ಕೆ ಸಂಬಂಧಿಸಿದಂತೆ ಹೊರಡಿಸಿದ್ದ ನೋಟಿಸ್ ಗಳನ್ನು ಪ್ರಶ್ನಿಸಿ ದಾವಣಗೆರೆಯ ರಹಿಲ್ ಕಮ್ಯುನಿಕೇಶನ್ ಮತ್ತು ಬೆಂಗಳೂರಿನ ಔಟ್ ಡೋರ್ ಅಡ್ವಟೈಸಿಂಗ್ ಅಸೋಸಿಯೇಷನ್ ಮೊದಲಾದವರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂಜಿಎಸ್ ಕಮಲ್ ನೇತೃತ್ವದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.
2016ರಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಜಾರಿಗೊಳಿಸಲು ಸಂವಿಧಾನಕ್ಕೆ 101ನೇ ತಿದ್ದುಪಡಿ ಮಾಡಲಾಗಿದ್ದು, ಸಂವಿಧಾನದ ಎಂಟನೇ ಷೆಡ್ಯೂಲ್ ಎರಡನೇ ಪಟ್ಟಿಯಲ್ಲಿನ ಎಂಟ್ರಿ ನಂಬರ್ 55 ಕೈಬಿಡಲಾಗಿದ್ದು, ಜಾಹೀರಾತು ತೆರಿಗೆಗೆ ಸಂಬಂಧಿಸಿದಂತೆ ಕಾನೂನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಲಾಗಿದೆ.
ಇನ್ನು ಸಂವಿಧಾನದ 7ನೇ ಶೆಡ್ಯೂಲ್ ಅನ್ನು ಎರಡನೇ ಪಟ್ಟಿಯ ಎಂಟ್ರಿ 55ನ್ನು ಕೈಬಿಟ್ಟಿರುವುದರಿಂದ ಪುರಸಭೆ ಮತ್ತು ನಗರಸಭೆಗಳಿಗೆ ಜಾಹೀರಾತು ತೆರಿಗೆ ವಿಧಿಸಲು ಸಂಗ್ರಹಿಸಲು ಅಧಿಕಾರವಿಲ್ಲ ಎಂದು ಹೇಳಲಾಗಿದೆ. ಜಾಹೀರಾತುಗಳಿಗೆ ತೆರಿಗೆ ವಿಧಿಸಲು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಕೆಲವು ಸೆಕ್ಷನ್ ಗಳನ್ನು ಆಸಂವಿಧಾನಿಕ ಎಂದು ನ್ಯಾಯಪೀಠ ತಿಳಿಸಿದೆ.