ಬೆಂಗಳೂರು: ಮೀಸಲಾತಿ ವಿಚಾರವಾಗಿ ಬಿಜೆಪಿ ಸ್ವಪಕ್ಷಿಯ ನಾಯಕರ ನಡುವೆಯೇ ಜಟಾಪಟಿ ಆರಂಭವಾಗಿದ್ದು, ಮೀಸಲಾತಿಯನ್ನು ಶಾಸಕ ಯತ್ನಾಳ್ ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.
ಸಚಿವ ಆರ್. ಅಶೋಕ್ ಹಳೇ ಮೈಸೂರು ಭಾಗದಿಂದ 50 ಸೀಟು ಗೆದ್ದು ತರಲಿ ಆಮೇಲೆ ಒಕ್ಕಲಿಗ ಸಮಾಜಕ್ಕೆ ಮೀಸಲಾತಿ ನೋಡೋಣ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಎಷ್ಟು ಸೀಟು ತರ್ತೇವೆಂದು ನೋಡಿ ಮೀಸಲಾತಿ ಕೊಡುವುದಿಲ್ಲ. ಶಾಸಕ ಯತ್ನಾಳ್ ರಾಜಕೀಯವಾಗಿ ಮಾತನಾಡಬಾರದಿತ್ತು ಎಂದು ಕೌಂಟರ್ ನೀಡಿದ್ದಾರೆ.
ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದೇವೆ ಎಂದರೆ ಮೀಸಲಾತಿ ಪರಿಗಣಿಸಲಾಗುತ್ತದೆ. ಅವರು ಬಲಾಢ್ಯರೆಂದರೆ ಅವರಿಗೆ ಮೀಸಲಾತಿಯನ್ನು ಕೊಡುವುದಿಲ್ಲ, ಶಾಸಕ ಯತ್ನಾಳ್ ತಾರ್ಕಿಕವಾಗಿ ಮಾತನಾಡಬೇಕಿತ್ತು. ಅವರು ಕೇಂದ್ರದಲ್ಲಿಯೂ ಮಂತ್ರಿಯಾಗಿದ್ದವರು, ನಮಗೆಲ್ಲ ನಾಯಕರು ಎಂದುಕೊಂಡಿದ್ದೆವು. ಆದರೆ ಮೀಸಲಾತಿ ವಿಚಾರದಲ್ಲಿ ರಾಜಕೀಯವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದೇವೆ ಎಂಬ ಕಾರಣಕ್ಕೆ ಪಂಚಮಸಾಲಿ ಸಮುದಾಯದವರು ಮೀಸಲಾತಿ ಕೇಳುತ್ತಿದ್ದಾರೆ. ರಾಜಕೀಯ ಶಕ್ತಿಯನ್ನು ಇಟ್ಟುಕೊಂಡು ಮೀಸಲಾತಿ ಕೊಡಲ್ಲ ಎಂದು ಹೇಳಿದರು.