ಬೆಂಗಳೂರು: ನರೇಗಾ ಯೋಜನೆ ಕಾಮಗಾರಿಗಳಲ್ಲಿ ಮಹಿಳಾ ಕಾರ್ಮಿಕರಿಗೆ ಕೆಲಸದಲ್ಲಿ ವಿನಾಯಿತಿ ನೀಡಲಾಗಿದೆ. ಗರ್ಭಿಣಿ, ಬಾಣಂತಿಯರಿಗೆ ಶೇಕಡ 50ರಷ್ಟು, ಸಾಮಾನ್ಯ ಮಹಿಳೆಯರಿಗೆ ಶೇಕಡ 10ರಷ್ಟು ಕೆಲಸದಲ್ಲಿ ರಿಯಾಯಿತಿ ನೀಡಲಾಗುತ್ತದೆ.
ಈ ಮೂಲಕ ಮಹಿಳಾ ಕಾರ್ಮಿಕರನ್ನು ನರೇಗಾ ಕೆಲಸದಲ್ಲಿ ಹೆಚ್ಚಾಗಿ ತೊಡಗಿಕೊಳ್ಳುವಂತೆ ಮಾಡಲು ಮತ್ತು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತೆ ಕೆಲಸದಲ್ಲಿ ವಿನಾಯಿತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ.
ವೈಯಕ್ತಿಕ ಮತ್ತು ಸರಳ ಕೆಲಸಗಳಿಗೆ ಗರ್ಭಿಣಿ ಬಾಣಂತಿಯರನ್ನು ನೇಮಕ ಮಾಡಲು ಸೂಚಿಸಲಾಗುತ್ತಿದ್ದು, ಮಗು ಜನಿಸುವ ಮೊದಲು ಆರು ತಿಂಗಳ ಒಳಗಿನ ಮತ್ತು ಮಗು ಜನಿಸಿದ ನಂತರ ಆರು ತಿಂಗಳವರೆಗಿನ ಮಹಿಳೆಯರಿಗೆ ಈ ಅವಕಾಶ ಕಲ್ಪಿಸಲಾಗಿದೆ.
ನರೇಗಾ ಕಾಮಗಾರಿಗಳಿಂದ ದೂರ ಉಳಿಯುವ ಮಹಿಳೆಯರನ್ನು ಗುರುತಿಸಿ ಜಾಬ್ ಕಾರ್ಡ್ ವಿತರಿಸಲು ಸೂಚಿಸಲಾಗಿದೆ. ಎಲ್ಲಾ ಕಾಮಗಾರಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಶೇಕಡ 51 ರಷ್ಟು ಇದ್ದು, ಈ ಪ್ರಮಾಣವನ್ನು ಇನ್ನಷ್ಟು ಏರಿಕೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.
ಆದ್ಯತೆಯ ಮೇರೆಗೆ ಜಾಬ್ ಕಾರ್ಡ್, ಅಕುಶಲ ಕೆಲಸ, ವೈಯಕ್ತಿಕ ಕಾಮಗಾರಿ ವಹಿಸುವುದು, ಮಹಿಳೆಯರ ಹೆಸರಲ್ಲಿ ಎನ್ಎಂಆರ್ ಸೃಜನೆಗೆ ಒತ್ತು, ಸಮುದಾಯ ಕಾಮಗಾರಿಗಳಲ್ಲಿ ಶೇಕಡ 50ರಷ್ಟು ಮಹಿಳೆಯರು ಭಾಗವಹಿಸುವಂತೆ ನೋಡಿಕೊಳ್ಳುವುದು ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ.
ನಿಗದಿಪಡಿಸಲಾದ ಕೆಲಸದಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಲು ಆರೋಗ್ಯ ಇಲಾಖೆ ನೀಡುವ ತಾಯಿ ಕಾರ್ಡ್ ಆಧಾರವಾಗಿ ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.