ನನ್ನ ಮಗ ಮತ್ತು ಮಗಳಿಗೆ ವಿದೇಶದಲ್ಲಿ ಉದ್ಯೋಗ ನೀಡುವಂತೆ ಕೇಳಿಕೊಂಡಿದ್ದೇನೆ. ಸಾಧ್ಯವಾದರೆ ಅಲ್ಲಿಯೇ ಪೌರತ್ವವನ್ನು ಪಡೆಯಿರಿ ಎಂದೂ ಹೇಳಿದ್ದೇನೆ ಎಂದು ಆರ್.ಜೆ.ಡಿ. ಮುಖಂಡ ಅಬ್ದುಲ್ ಬಾರಿ ಸಿದ್ದಿಕಿ ಹೇಳಿದ್ದಾರೆ. ಇದಕ್ಕೆ ಕಾರಣ ಇವರಿಗೆ ಭಾರತದಲ್ಲಿ ಅಭದ್ರತೆ ಕಾಡುತ್ತಿದೆಯಂತೆ.
ಭಾರತದಲ್ಲಿ ಮುಸ್ಲಿಂ ಸಮುದಾಯವು ಅಭದ್ರತೆಯನ್ನು ಎದುರಿಸುತ್ತಿದೆ ಎಂದು ಆರೋಪಿಸಿದ ಬಿಹಾರದ ಮಾಜಿ ಸಚಿವರೂ ಆಗಿರುವ ಅಬ್ದುಲ್ ಬಾರಿ ಸಿದ್ದಿಕಿ, “ನನಗೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಮಗ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಉತ್ತೀರ್ಣರಾದ ಮಗಳು ಇದ್ದಾರೆ. ನಾನು ನನ್ನ ಮಗ ಮತ್ತು ಮಗಳಿಗೆ ಅಲ್ಲಿ (ವಿದೇಶದಲ್ಲಿ) ಕೆಲಸ ಮಾಡಲು ಹೇಳಿದ್ದೇನೆ, ಅವರಿಗೆ ಸಾಧ್ಯವಾದರೆ ಪೌರತ್ವವನ್ನು ಪಡೆಯಲು ಹೇಳಿದ್ದೇನೆ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದರು.
ಬಿಹಾರ ಕೌನ್ಸಿಲ್ ಅಧ್ಯಕ್ಷ ದೇವೇಶ್ ಚಂದ್ರ ಠಾಕೂರ್ ಅವರನ್ನು ಸನ್ಮಾನಿಸಲು ದೈನಿಕ್ ಪ್ಯಾರಿ ಉರ್ದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿದ್ದಿಕಿ ಭಾಗವಹಿಸಿದ್ದರು.
“ಮನುಷ್ಯನೊಬ್ಬ ತನ್ನ ಮಕ್ಕಳಿಗೆ ತಾಯ್ನಾಡನ್ನು ತೊರೆಯಲು ಹೇಳುವುದು ಎಷ್ಟು ನೋವಿನ ಸಂಗತಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ಆದರೆ ಅಂತಹ ಸಮಯ ಬಂದಿದೆ. ಭಾರತದ ವಾತಾವರಣ ಸರಿಯಿಲ್ಲ. ಆದ್ದರಿಂದ ಅವರು ಇಲ್ಲಿಯ ವಾತಾವರಣವನ್ನು ಸಹಿಸಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂದು ನನಗೆ ತಿಳಿದಿಲ್ಲ” ಎಂದು ಹೇಳಿದರು.