ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಆರಂಭಗೊಂಡ ಬಳಿಕ ಹೆಣ್ಣು ಮಕ್ಕಳಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಪೈಕಿ ಅವರುಗಳಿಗೆ ಉನ್ನತ ವ್ಯಾಸಂಗ ನಿರಾಕರಿಸಿರುವುದೂ ಸಹ ಒಂದು. ಮಂಗಳವಾರದಂದು ತಾಲಿಬಾನ್ ಆಡಳಿತದ ಶಿಕ್ಷಣ ಸಚಿವಾಲಯದಿಂದ ಹೊರಡಿಸಲಾಗಿರುವ ಆದೇಶದಲ್ಲಿ ವಿಶ್ವವಿದ್ಯಾಲಯಗಳಿಗೆ ಹೆಣ್ಣುಮಕ್ಕಳ ಪ್ರವೇಶವನ್ನು ನಿರಾಕರಿಸಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಹೆಣ್ಣು ಮಕ್ಕಳು ಶಾಲಾ ಕೊಠಡಿಯಲ್ಲಿಯೇ ಕಣ್ಣೀರಿಟ್ಟಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದ್ದು, ಇದು ಈಗ ವೈರಲ್ ಆಗಿದೆ. ವಿದ್ಯಾರ್ಥಿನಿಯರು ಪರಸ್ಪರ ಸಂತೈಸಿಕೊಳ್ಳುತ್ತಾ ಕಣ್ಣೀರು ಹಾಕುತ್ತಿದ್ದು, ಹೃದಯವಿದ್ರಾವಕವಾಗಿದೆ. ತಮ್ಮ ಶಿಕ್ಷಣದ ಹಕ್ಕನ್ನು ಕಿತ್ತುಕೊಂಡಿರುವ ತಾಲಿಬಾನಿಗಳ ನಿರ್ಧಾರಕ್ಕೆ ಈ ವಿದ್ಯಾರ್ಥಿನಿಯರು ಕಣ್ಣೀರಿನ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರ ಪ್ರವೇಶ ನಿರಾಕರಿಸಿರುವುದಕ್ಕೆ ಹಲವು ದೇಶಗಳು ಖಂಡನೆ ವ್ಯಕ್ತಪಡಿಸಿದ್ದು, ವಿಶ್ವಸಂಸ್ಥೆಯು ಕೂಡಾ ತಾಲಿಬಾನ್ ನ ಈ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಿದೆ. ಆದರೆ ತಾಲಿಬಾನಿಗಳು ಮಾತ್ರ ತಮ್ಮ ತೀರ್ಮಾನವನ್ನು ಸಮರ್ಥಿಸಿಕೊಳ್ಳುತ್ತಿದ್ದು, ವಿಶ್ವವಿದ್ಯಾಲಯಗಳ ಮುಂದೆ ಬಿಗಿ ಬಂದೋಬಸ್ತ್ ಏರ್ಪಡಿಸಿ ವಿದ್ಯಾರ್ಥಿನಿಯರ ಪ್ರವೇಶವನ್ನು ತಡೆಯಲಾಗುತ್ತಿದೆ.