ಬೆಳಗಾವಿ: ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳ ಆಯೋಗ ಇಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ಕುರಿತು ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಇಂದು ಮಧ್ಯಂತರ ವರದಿ ಸಲ್ಲಿಸಿದ್ದಾರೆ. ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಇಂದು ಬೆಳಿಗ್ಗೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ವರದಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಸಾಮಾನ್ಯವಾಗಿ ವರದಿ ಬಂದ ಸಂದರ್ಭದಲ್ಲಿ ವರದಿ ಒಪ್ಪಿಕೊಳ್ಳುವ ಮೊದಲೇ ವಿವರಗಳನ್ನು ಹೇಳುವಂತದ್ದು ಯಾವತ್ತೂ ಆಗಿಲ್ಲ. ಉದಾಹರಣೆಗೆ ನಾಗಮೋಹನ್ ದಾಸ್ ವರದಿ ಬಂದ ಒಂದು ವರ್ಷದ ನಂತರ ಅದನ್ನು ಒಪ್ಪಿದ ಬಳಿಕ ಅದರ ವಿವರ ಕೊಟ್ಟಿದ್ದೇನೆ. ಸದಾಶಿವ ಆಯೋಗದ ವರದಿ ಬಂದು ಹತ್ತು ವರ್ಷವಾಗಿದೆ ಆದರೆ ಸರ್ಕಾರದ ಒಪ್ಪಿಗೆ ಪಡೆದಿಲ್ಲವಾದ್ದರಿಂದ ಇನ್ನೂ ವಿವರ ನೀಡಲಾಗಿಲ್ಲ. ಕಾಂತರಾಜು ವರದಿ ಇನ್ನೂ ಆಯೋಗದಲ್ಲೇ ಇದ್ದು, ಸರ್ಕಾರದ ಮಟ್ಟಕ್ಕೆ ಬಂದಿಲ್ಲವಾದ್ದರಿಂದ ವಿವರ ನೀಡಲಾಗಿಲ್ಲ. ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಆದಷ್ಟು ಬೇಗ ಕಾನೂನಾತ್ಮಕವಾಗಿ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದರು.
ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂದು ನಿರ್ಧಾರ ಕೈಗೊಳ್ಳಲಾಗುವುದು. ಇದನ್ನು ಆದಷ್ಟು ಶೀಘ್ರವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ತಿಳಿಸಿದರು.