ಬೆಳಗಾವಿ: ರಾಜ್ಯದಲ್ಲಿ ಕೊರೊನಾ ಆತಂಕ ಎದುರಾಗಿದ್ದು, ಕೈಗೊಳ್ಳಬೇಕಿರುವ ಮುಂಜಾಗೃತಾ ಕ್ರಮ, ಗೈಡ್ ಲೈನ್ ವಿಚಾರವಾಗಿ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.
ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದು ಮಧ್ಯಾಹ್ನ 3 ಗಂಟೆಗೆ ಕೋವಿಡ್ ಕುರಿತು ಸಭೆ ಕರೆದಿದ್ದೇನೆ. ವಿದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದರಿಂದ ಭಾರತದಲ್ಲಿಯೂ ಮುಂಜಾಗೃತೆ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ, ಸಿದ್ಧತೆ ಬಗ್ಗೆ ಚರ್ಚಿಸಲಾಗುವುದು. ಜನರು ಜಾಗೃತೆ ವಹಿಸುವ ಅಗತ್ಯವಿದೆ ಆತಂಕಕ್ಕೀಡಾಗುವುದು ಬೇಡ. ಹೊಸ ಮಾರ್ಗಸೂಚಿ ಬಗ್ಗೆಯೂ ಚರ್ಚೆ ನಡೆಯಲಿದೆ ಎಂದರು.
ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ಕಟ್ಟೆಚ್ಚರಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಮತ್ತೆ ಕಠಿಣ ನಿಯಮಗಳು ಜಾರಿಯಾಗುವ ಸಾಧ್ಯತೆ ಇದೆ. ಕಳೆದ ಎರಡು ವರ್ಷಗಳಿಂದ ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದ್ದ ಕೋವಿಡ್ ಮಹಾಮಾರಿ ಈ ವರ್ಷವೂ ಮತ್ತೆ ನಿರ್ಬಂಧ ಹೇರಲಿದೆ ಎಂಬ ಆತಂಕ ಸಾರ್ವಜನಿಕರಲ್ಲಿ ಶುರುವಾಗಿದೆ.