ಅಹಮದಾಬಾದ್: ಗುಜರಾತ್ ನ ಚೋಟಾ ಉದೇಪುರ್ ನಲ್ಲಿ ಚಲಿಸುತ್ತಿದ್ದ ಬಸ್ ನೊಳಗೆ ಪತ್ನಿಯ ಕತ್ತು ಸೀಳಿ ಕೊಂದ ವ್ಯಕ್ತಿಯೊಬ್ಬನನ್ನು ಬುಧವಾರ ಬಂಧಿಸಲಾಗಿದೆ.
ಆರೋಪಿಯನ್ನು ಅಮೃತ್ ರಥ್ವಾ ಎಂದು ಗುರುತಿಸಲಾಗಿದ್ದು, ಆರೋಪಿ ಸೂರತ್ ಜಿಲ್ಲೆಯಲ್ಲಿ ನೆಲೆಸಿದ್ದು, ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು ಕೊಲ್ಲಲು 200 ಕಿಲೋಮೀಟರ್ ಗೂ ಹೆಚ್ಚು ಪ್ರಯಾಣಿಸಿದ್ದಾನೆ.
ಘಟನೆ ಸಂಭವಿಸಿದಾಗ ಪತ್ನಿ ಸರ್ಕಾರಿ ಜಿಎಸ್ಆರ್ಟಿಸಿಯ ಕಂಡಕ್ಟರ್ ಆಗಿ ಕರ್ತವ್ಯದಲ್ಲಿದ್ದರು. ಪದೇ ಪದೇ ಫೋನ್ನಲ್ಲಿ ಜಗಳವಾಡಿದ ನಂತರ ಆರೋಪಿ ತನ್ನ ಪತ್ನಿಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಮಂಗಳವಾರ ತನ್ನ ಪತ್ನಿ ಕೆಲಸ ಮಾಡುವ ಭಿಖಾಪುರ ಗ್ರಾಮದಿಂದ ಬಸ್ ಹತ್ತಿದ್ದಾನೆ. ಪತ್ನಿ ಮಂಗುಬೆನ್ ಕಂಡಕ್ಟರ್ ಸೀಟಿನಲ್ಲಿ ಕುಳಿತಿದ್ದರು. ಆರೋಪಿ ಏಕಾಏಕಿ ಆಕೆಯ ಕಡೆಗೆ ಬಂದು ಇರಿದಿದ್ದಾನೆ. ನಂತರ ಆಕೆಯ ಕತ್ತು ಸೀಳಿದ್ದು, ಮಂಗುಬೆನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.