ಶಿವಮೊಗ್ಗ: ರಾಜ್ಯದ ಮೂಲೆ ಮೂಲೆಗೂ ಗಮಕ ಕಲೆಯ ಘಮವನ್ನು ಬೀರಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹೊಸಹಳ್ಳಿಯ ಹೆಚ್.ಆರ್. ಕೇಶವಮೂರ್ತಿರು ಇಂದು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
1934ರ ಫೆ.22 ರಂದು ಹೊಸಹಳ್ಳಿ ರಾಮಸ್ವಾಮಿ ಶಾಸ್ತ್ರಿ ಮತ್ತು ಲಕ್ಷ್ಮೀದೇವಮ್ಮ ದಂಪತಿಯ ಪುತ್ರರಾಗಿ ಜನಿಸಿದ ಇವರು ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು. ತಂದೆ-ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣಗಳಿಂದ ಉತ್ತೇಜಿತರಾಗಿ, 16 ನೇ ವಯಸ್ಸಿನಿಂದ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು.
ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಢುವುದನ್ನು ರೂಢಿಸಿಕೊಂಡ ಅವರು, 100 ಕ್ಕೂ ಅಧಿಕ ವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಮೂಲಕ ‘ಶತರಾಗಿ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಶಾಂತಲನಾಟ್ಯಶ್ರೀ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ ಸೇರಿದಂತೆ 2022 ರಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.
89 ವರ್ಷದ ಕೇಶವಮೂರ್ತಿಗಳು ಗಮಕ ಕ್ಷೇತ್ರದಲ್ಲಿ ಪರಿಣಿತರಾಗಿದ್ದು ತಮ್ಮ ಜೀವನವನ್ನು ಗಮಕ ಕಲೆಗಾಗಿಯೇ ಮುಡಿಪಾಗಿರಿಸಿದ್ದರು.
ಅವರ ನಿಧನಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೇಶವಮೂರ್ತಿಗಳ ಅಗಲಿಕೆ ತೀವ್ರ ನೋವನ್ನು ತಂದಿದ್ದು, ಭಗವಂತ ಕುಟುಂಬ ಮತ್ತು ಸಮಾಜಕ್ಕೆ ಈ ನೋವು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.