ಶಿವಮೊಗ್ಗ: ಕನ್ನಡದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.
ಅವರು ಇಂದು ನಗರದ ಶ್ರೀ ಬಸವೇಶ್ವರ ಪದವಿ ಪೂರ್ವ ಕಾಲೇಜಿಗೆ ಸೌಹಾರ್ದ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದರು.
ಕನ್ನಡ ನಮ್ಮ ತಾಯಿ ಭಾಷೆ, ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಅಭಿಮಾನ ಹೊಂದಿರಬೇಕು. ಕನ್ನಡ ಅನ್ನದ ಭಾಷೆಯಾಗಬೇಕು. ವ್ಯಾವಹಾರಿಕವಾಗಿ ಇಂದು ಹಲವು ಭಾಷೆಗಳನ್ನು ಕಲಿತರೂ ಕೂಡ ಮಾತೃಭಾಷೆಗೆ ಅದು ಅಡ್ಡಿಯಾಗಬಾರದು. ಕುವೆಂಪು ಹೇಳಿದಂತೆ ಎಲ್ಲಾದರೂ ಇರಲಿ ಹೇಗಾದರೂ ಇರಲಿ ಎಂದೆಂದಿಗೂ ಕನ್ನಡವಾಗಿರಬೇಕು ಎಂದರು.
ಬದುಕಲು ಜ್ಞಾನ ಮತ್ತು ಆತ್ಮವಿಶ್ವಾಸ ಮುಖ್ಯ. ವಿದ್ಯಾರ್ಥಿಗಳು ಬಸವಣ್ಣ ಸೇರಿದಂತೆ ಹಲವರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು. ಮೌಲ್ಯಗಳನ್ನು ಅರಿತುಕೊಳ್ಳಬೇಕು. ಜ್ಞಾನದ ಅರಿವು ಬಹಳ ಮುಖ್ಯ. ಅದಕ್ಕಾಗಿ ಅಧ್ಯಯನಶೀಲರಾಗಬೇಕು ಎಂದ ಅವರು, ಸಾವಿರಾರು ವರ್ಷಗಳಿಂದಲೂ ಕನ್ನಡ ಭಾಷೆ ಉಳಿದುಕೊಂಡು ಬಂದಿದೆ. ಅದಕ್ಕೆ ಆಪತ್ತು ಬಂದಿರಬಹುದು. ಆದರೆ ಎಂದೂ ಸಾಯುವುದಿಲ್ಲ ಎಂದರು.