ದಿನಗೂಲಿ ನೌಕರರೊಬ್ಬರಿಗೆ 14 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ಇದರಿಂದಾಗಿ ಕುಟುಂಬ ಕಂಗಾಲಾಗಿ ಹೋಗಿದೆ. ಇಂತಹದೊಂದು ಘಟನೆ ಬಿಹಾರದ ರೋಹತಾಸ್ ಜಿಲ್ಲೆಯಲ್ಲಿ ನಡೆದಿದೆ.
ಕರಗಹರ್ ಗ್ರಾಮದ ಮನೋಜ್ ಯಾದವ್ ಎಂಬವರಿಗೆ ಕಳೆದ ವಾರಾಂತ್ಯದಲ್ಲಿ ನೋಟಿಸ್ ನೀಡಲಾಗಿದ್ದು, 14 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ಇದರಲ್ಲಿ ಸೂಚಿಸಲಾಗಿದೆ. ಮನೋಜ್ ಯಾದವ್ ಬ್ಯಾಂಕಿನ ವಹಿವಾಟನ್ನು ಪರಿಗಣಿಸಿ ಈ ನೋಟಿಸ್ ನೀಡಲಾಗಿದೆ ಎಂಬುದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಾದವಾಗಿದೆ.
ಆದರೆ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಮನೋಜ್ ಯಾದವ್, ದೆಹಲಿ – ಹರಿಯಾಣ – ಪಂಜಾಬ್ ಮೊದಲಾದೆಡೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮಾಡಿದ್ದೇನೆಂದು ಹೇಳಲಾಗಿದ್ದು, ಈ ವೇಳೆ ತನ್ನ ಆಧಾರ್, ಪಾನ್ ಕಾರ್ಡ್ ಪ್ರತಿಯನ್ನು ನೀಡಿದ್ದ. ಇದನ್ನು ದುರುಪಯೋಗಪಡಿಸಿಕೊಂಡು ವಹಿವಾಟು ನಡೆಸಿರಬಹುದು ಎಂದು ಶಂಕಿಸಲಾಗುತ್ತಿದೆ.