‘ರಾಮ ಮಂದಿರ ಏಕೆ ಬೇಡ’ ಎಂಬ ಕೃತಿ ಮೂಲಕ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಸಾಹಿತಿ ಕೆ.ಎಸ್. ಭಗವಾನ್ ಅವರ ವಿರುದ್ಧ ಸಾಗರ ಜೆ ಎಂ ಎಫ್ ಸಿ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಅವರಿಗೆ ಜಾಮೀನು ದೊರೆತಿದೆ.
ಇಕ್ಕೇರಿಯ ಮಹಾಬಲೇಶ್ವರ ಎಂಬವರು ಭಗವಾನ್ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದು, ಇದರ ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಭಗವಾನ್ ಅವರಿಗೆ ನ್ಯಾಯಾಲಯದಿಂದ ಸಮನ್ಸ್ ಹೊರಡಿಸಲಾಗಿದ್ದರೂ ಅವರು ಹಾಜರಾಗಿರಲಿಲ್ಲ.
ಹೀಗಾಗಿ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದ್ದು, ಬಳಿಕ ಮಂಗಳವಾರದಂದು ಭಗವಾನ್ ಅವರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಹಾಜರಾಗಿ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 31ಕ್ಕೆ ನಿಗದಿಪಡಿಸಲಾಗಿದೆ.