ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 400 ಫಾರ್ಮಸಿ ಅಧಿಕಾರಿಗಳ ಹುದ್ದೆ ಹಾಗೂ 150 ಕಿರಿಯ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.
ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ನೇಮಕಾತಿ ಸಮಿತಿಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ಹೊರಡಿಸಿದೆ. ನೇಮಕಾತಿ ಸಂಬಂಧ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು ಕೂಡಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಿಯಮಾನಸಾರ ಅಲ್ಪಾವಧಿ ಟೆಂಡರ್ ಕರೆದು ನೇಮಕಾತಿ ಮಾಡಿಕೊಳ್ಳಲು ಸೂಚಿಸಲಾಗಿದೆ.
ಈ ಹುದ್ದೆಗಳನ್ನು ಹೊರಗುತ್ತಿಗೆ ಮೂಲಕ ಭರ್ತಿ ಮಾಡುವ ಬಗ್ಗೆ ಅನುದಾನವನ್ನು ಖಾಲಿ ಇರುವ ರಾಜ್ಯ ಮತ್ತು ಜಿಲ್ಲಾ ವಲಯದ ಸಂಸ್ಥೆಗಳಲ್ಲಿ ಯಾವ ಲೆಕ್ಕ ಶೀರ್ಷಿಕೆಗಳಡಿ ಮಂಜೂರಾಗಿರುತ್ತದೆಯೋ ಅದೇ ಲೆಕ್ಕ ಶೀರ್ಷಿಕೆಯ ಉಪ ಲೆಕ್ಕಶೀರ್ಷಿಕೆಯಡಿ ನೇಮಕ ಮಾಡಿಕೊಳ್ಳಬೇಕು ಎಂದು ಹೇಳಲಾಗಿದೆ.